ಶಿವಮೊಗ್ಗ | ಮಕ್ಕಳ ಗಣಿತ ಸಂತೆ ; ಅನುಭವದ ಮೂಲಕ ಕಲಿಕೆಯ ಹಬ್ಬ

ಶಿವಮೊಗ್ಗ

ಶಿವಮೊಗ್ಗ ತಾಲ್ಲೂಕಿನ ಕೂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮಕ್ಕಳಿಗಾಗಿ ವಿಶಿಷ್ಟವಾದ “ಗಣಿತ ಸಂತೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪುಸ್ತಕದ ಅಕ್ಷರಗಳಿಗೆ ಸೀಮಿತವಾಗಿರುವ ಗಣಿತ ಜ್ಞಾನವನ್ನು ದಿನನಿತ್ಯದ ಜೀವನದಲ್ಲಿ ಅನ್ವಯಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯ ಬಿ.ಆರ್. ವಾಗೀಶ್ ಅವರು ತರಕಾರಿ ಖರೀದಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, “ಮಕ್ಕಳು ಪುಸ್ತಕದಲ್ಲಿ ಗಣಿತದ ಮೂಲಕ್ರಿಯೆಗಳಾದ ಕೂಡುವುದು, ಕಳೆಯುವುದು, ಗುಣಿಸುವುದು ಮತ್ತು ಭಾಗಿಸುವುದನ್ನು ಕಲಿಯುತ್ತಾರೆ. ಆದರೆ ಈ ರೀತಿಯ ಗಣಿತ ಸಂತೆಗಳ ಮೂಲಕ ಅವರು ಹಣದ ಲೆಕ್ಕಾಚಾರ, ತೂಕ-ಅಳತೆ, ಲಾಭ-ನಷ್ಟದ ಲೆಕ್ಕಗಳನ್ನು ನೇರ ಅನುಭವದಿಂದ ಅರಿಯುತ್ತಾರೆ.

ದಿನನಿತ್ಯದ ಬದುಕಿನಲ್ಲಿ ಗಣಿತದ ಮಹತ್ವವನ್ನು ತಿಳಿಸುವ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಶಿಕ್ಷಕರಿಗೆ ಅಭಿನಂದಿಸುತ್ತೇನೆ ಎಂದರು.

ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಪಿ.ಕೆ. ಮಾತನಾಡಿ, “ಮಕ್ಕಳು ಗಣಿತ ಸಂತೆಯಲ್ಲಿ ಅಪಾರ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ತಮ್ಮ ಕೈಯಿಂದಲೇ ತರಕಾರಿ, ಹಣ್ಣು ಹೂವು ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಆತ್ಮವಿಶ್ವಾಸವನ್ನು ಬೆಳೆಸಿಕೊಂಡಿದ್ದಾರೆ.

ಮಕ್ಕಳಿಗೆ ಮಾರಾಟಕ್ಕೆ ಅಗತ್ಯ ಸಾಮಗ್ರಿಗಳನ್ನು ಸಿದ್ಧಪಡಿಸಿ ಸಹಕರಿಸಿದ ಪಾಲಕರು ಮತ್ತು ಪೋಷಕರಿಗೆ ಹೃತ್ತೂರ್ವಕ ಅಭಿನಂದನೆಗಳು” ಎಂದು ತಿಳಿಸಿದರು.

ಸಂತೆ ಸಂದರ್ಭದಲ್ಲಿ ಮಕ್ಕಳು ತಮ್ಮದೇ ಅಂಗಡಿಗಳನ್ನು ಸಿದ್ಧಪಡಿಸಿಕೊಂಡು ಗ್ರಾಹಕರನ್ನು ಆಕರ್ಷಿಸುವ ರೀತಿಯಲ್ಲಿ ಮಾರಾಟ ನಡೆಸಿದರು. ತೂಕದ ಯಂತ್ರ, ಅಳತೆ ಪಾತ್ರೆ, ಹಣದ ಲೆಕ್ಕಪತ್ರ ಇತ್ಯಾದಿಗಳನ್ನು ಬಳಸಿಕೊಂಡು ಖರೀದಿ ಮಾರಾಟ ನಡೆಸಿದರು.

ಈ ಪ್ರಕ್ರಿಯೆಯ ಮೂಲಕ ಮಕ್ಕಳಲ್ಲಿ ಸಂವಹನ ಕೌಶಲ್ಯ, ಜವಾಬ್ದಾರಿ ಹಾಗೂ ತಂಡದ ಮನೋಭಾವವೂ ಬೆಳೆಯಿತು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್. ಹರೀಶ್, ಗ್ರಾಮದ ಮುಖಂಡ ಮೈಲಾರಪ್ಪ, ಶಿಕ್ಷಕ ವೃಂದದ ವನಿತಾ, ದೀಪಾ ಮತ್ತು ಕೃಷ್ಣಮೂರ್ತಿ, ಅಡುಗೆ ಸಿಬ್ಬಂದಿ ನೇತ್ರಾವತಿ, ಕವಿತಾ, ಶಿಲ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಸಂತೋಷದಿಂದ ಖರೀದಿ-ಮಾರಾಟ ಚಟುವಟಿಕೆಯಲ್ಲಿ ತೊಡಗಿಕೊಂಡು ಗಣಿತ ಕಲಿಕೆಯನ್ನು ಹಬ್ಬದಂತೆಯೇ ಆಚರಿಸಿದರು.

ಒಟ್ಟಾರೆ, ಈ ಗಣಿತ ಸಂತೆ ಕಾರ್ಯಕ್ರಮವು ಮಕ್ಕಳಿಗೆ ಅನುಭವಾಧಾರಿತ ಕಲಿಕೆಯ ಮಹತ್ವವನ್ನು ಸಾರುವಂತೆ ಯಶಸ್ವಿಯಾಗಿ ನೆರವೇರಿತು.

Author