ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಪ್ರತಿಭಟನೆ ; ಜೇಬು ತುಂಬಿಸಿಕೊಳ್ಳುವ ಯೋಜನೆ ಎಂದ ಎ.ಟಿ. ರಾಮಸ್ವಾಮಿ

ಶಿವಮೊಗ್ಗ

ಶಿವಮೊಗ್ಗ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜನರ ಉದ್ದಾರಕ್ಕಾಗಿ ಮಾಡುತ್ತಿಲ್ಲ. ಈ ಯೋಜನೆ ಜಾರಿಗೆ ತರುವುದರ ಹಿಂದೆ ಕೇವಲ ಜೇಬು ತುಂಬಿಸಿಕೊಳ್ಳುವದಾಗಿದೆ ಎಂದು ಮಾಜಿ ಶಾಸಕ ಹಾಗೂ ಪರಿಸರಕ್ಕಾಗಿ ನಾವು ಸಂಘಟನೆಯ ಎ.ಟಿ.ರಾಮಸ್ವಾಮಿ ಆರೋಪಿಸಿದ್ದಾರೆ.

ಗುರುವಾರ ಇಂದು ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಸೀನಪ್ಪ ಶೆಟ್ಟಿ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದ ಅವರು, ಪ್ರಪಂಚದ ಅಪರೂಪದ ಜೀವವೈವಿಧ್ಯ ತಾಣವಾಗಿರುವ ಪಶ್ಚಿಮ ಘಟ್ಟದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಒಂದು ಮರಕಡಿಯಲು ಬಿಡುವುದಿಲ್ಲ ಎಂದು ಹೇಳಿದರು.

ಈ ಯೋಜನೆಯಿಂದ ನಮ್ಮ ನೀರಿನ ಭದ್ರತೆಗೆ ಕಂಟಕಪ್ರಾಯವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಜಲಮೂಲಕ್ಕೆ ಧಕ್ಕೆ ತರಲಿರುವ ಈ ಯೋಜನೆಯನ್ನು ಈ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ನಿರಂತರ ಹೋರಾಟ ಮಾಡುವುದಾಗಿ ಎಚ್ಚರಿಸಿದರಲ್ಲದೆ, ಅರಣ್ಯ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕಾದ ಸರ್ಕಾರವೇ ಕಾಯ್ದೆ ಉಲ್ಲಂಘಿಸಿ ಯೋಜನೆ ಜಾರಿಗೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಎ.ಟಿ.ರಾಮಸ್ವಾಮಿ ಕಿಡಿಕಾರಿದರು.

ಪ್ರೊ. ಬಿ ಎಂ. ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಅದರ ಅಧಿಕಾರಿ ಪ್ರಣೀತಾ ಕೌಲ್ ನೀಡಿದ ವರದಿಯಲ್ಲಿ ಈ ಭಾಗದಲ್ಲಿ ಸಿಂಗಳಿಕ, ಮುಂಗಟ್ಟೆ ಹೆಚ್ಚು ವಾಸಿಸುತ್ತಿವೆ. ಇದರಿಂದ ಇಲ್ಲಿ ಅಭಿವೃದ್ಧಿ ಸಲ್ಲದು ಎಂದು ವರದಿ ನೀಡಿದ್ದರೂ, ರಾಜ್ಯದ ಅರಣ್ಯ ಅಧಿಕಾರಿ ಸೆಂಥಿಲ್‌ಕುಮಾರ್, ಇಲ್ಲಿ ಯೋಜನೆಯಿಂದ ಯಾವುದೇ ಪ್ರ್ರಾಣಿ-ಪಕ್ಷಿಗೆ ಸಮಸ್ಯೆಯಾಗುವುದಿಲ್ಲ. ಈ ಯೋಜನೆ ಜಾರಿಮಾಡಬಹುದು ಎಂದಿರುವುದು ದುರಂತದ ವಿಷಯ ಎಂದರು.

Author