ಶಿವಮೊಗ್ಗ | 10,200 ಕೋಟಿ ಲೂಟಿ ಮಾಡಲು ಶರಾವತಿ ಯೋಜನೆ ಜಾರಿ : ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ

ಶಿವಮೊಗ್ಗ

ಶಿವಮೊಗ್ಗ, ಶರಾವತಿ ಪಂಪ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ‘ಪರಿಸರಕ್ಕಾಗಿ ನಾವು’ ಮತ್ತು ‘ರಾಷ್ಟ್ರಭಕ್ತರ ಬಳಗ’ದ ವತಿಯಿಂದ ಫೆಬ್ರವರಿ 12ರ ಗುರುವಾರ ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಪ್ರೊಫೆಸರ್ ಡಿ.ಎಂ. ಕುಮಾರಸ್ವಾಮಿ ಹೇಳಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಯೋಜನೆಯಿಂದ ಸುಮಾರು 16,000 ಮರಗಳನ್ನು ಕಡಿಯುವ ಪ್ರಸ್ತಾವನೆ ಇದ್ದು, ಇದು ವನ್ಯಜೀವಿಗಳ ಆವಾಸಸ್ಥಾನ ಹಾಗೂ ಪರಿಸರಕ್ಕೆ ದೊಡ್ಡ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಯೋಜನೆಯು ಸಿಂಹಬಾಲದ ಸಿಂಹದ (Lion Tailed Macaque) ಅಭಯಾರಣ್ಯದ ಹೃದಯ ಭಾಗದಲ್ಲಿ ಜಾರಿಯಾಗುತ್ತಿರುವುದು ವನ್ಯಜೀವಿ ಕಾಯ್ದೆ 1972ರ ಆಶಯಕ್ಕೆ ವಿರುದ್ಧವಾಗಿದೆ.

ಬ್ಯಾಟರಿ ಸ್ಟೋರೇಜ್ ತಂತ್ರಜ್ಞಾನವು ಹೆಚ್ಚು ಪರಿಸರಸ್ನೇಹಿಯಾಗಿರುವಾಗ, ಸಾವಿರಾರು ಕೋಟಿ ವೆಚ್ಚದ ಈ ಯೋಜನೆಯು ಜನರ ಮೇಲೆ ಅನಗತ್ಯ ಆರ್ಥಿಕ ಹೊರೆ ಮತ್ತು ಪರಿಸರ ನಾಶಕ್ಕೆ ಕಾರಣವಾಗಲಿದೆ. ಈಗಾಗಲೇ ಶರಾವತಿ ಯೋಜನೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳು ಈ ಯೋಜನೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಅವರು ದೂರಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಇದು ಭೂಮಿಯ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು 10,200 ಕೋಟಿ ರೂ. ಲೂಟಿ ಮಾಡುವ ಯೋಜನೆಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಅಂತಿಮ ಅನುಮೋದನೆ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಇಂಧನ ಸಚಿವ ಜಾರ್ಜ್ ಅವರ ಗಮನಕ್ಕೆ ತರಲಾಗುವುದು. ಒಂದು ವೇಳೆ ಸರ್ಕಾರಗಳು ಸ್ಪಂದಿಸದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಸಿದರು.

ಆಗುಂಬೆ ಘಾಟಿಯಲ್ಲಿ 3,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟನಲ್ (ಸುರಂಗ) ಮಾರ್ಗದ ಬಗ್ಗೆಯೂ ಈಶ್ವರಪ್ಪ ಅವರುಅಸಮಾಧಾನ ವ್ಯಕ್ತಪಡಿಸಿದರು.

ಟನಲ್ ನಿರ್ಮಾಣದಿಂದ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿದ್ದು ಅದರ ಬದಲು ಪಿಲ್ಲರ್ ಹಾಕಿ ರಸ್ತೆ ಅಗಲೀಕರಣ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.

Author