ಶಿವಮೊಗ್ಗ,ಇಲ್ಯಾಸ್ ನಗರ ನಿವಾಸಿಗಳಿಂದ ನಗರ ಆಯುಕ್ತರಿಗೆ ಮೂಲಭೂತ ಸೌಕರ್ಯಗಳ ಸಂಬಂಧ ಮನಸಿ ಸಲ್ಲಿಸಿದ್ದಾರೆ.
ಇಲ್ಯಾಸ್ ನಗರ ಪ್ರದೇಶದ ನಿವಾಸಿಗಳು ಇಂದು ನಗರ ಆಯುಕ್ತರ ಕಚೇರಿಗೆ ಭೇಟಿ ನೀಡಿ, ತಮ್ಮ ಪ್ರದೇಶದಲ್ಲಿ ಉಂಟಾಗಿರುವ ಮೂಲಭೂತ ಸೌಕರ್ಯಗಳ ಕೊರತೆಗಳ ಬಗ್ಗೆ ಮನವಿ ಸಲ್ಲಿಸಿದರು.
ವಿಶೇಷವಾಗಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯ ದುಸ್ಥಿತಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಮನವಿಯಲ್ಲಿ ವಿವರವಾಗಿ ತಿಳಿಸಿದ್ದಾರೆ.
ನಿವಾಸಿಗಳು ಮಾತನಾಡಿ, ಕೆಲ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಮಳೆಗಾಲದಲ್ಲಿ ನೀರು ನಿಲ್ಲುವ ಪರಿಸ್ಥಿತಿ ಉಂಟಾಗುತ್ತಿದೆ. ಚರಂಡಿಗಳ ಕೊರತೆ ಹಾಗೂ ಸರಿಯಾದ ನೀರು ಹರಿವಿನ ವ್ಯವಸ್ಥೆ ಇಲ್ಲದಿರುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೂ ಜೊತೆಗೆ ಕುಡಿಯುವ ನೀರಿನ ಸರಬರಾಜು, ಬೀದಿ ದೀಪಗಳ ಅಳವಡಿಕೆ, ಕಸ ವಿಲೇವಾರಿ ವ್ಯವಸ್ಥೆ ಹಾಗೂ ಸ್ವಚ್ಛತೆ ಸೇರಿದಂತೆ ಕೆಲವು ಮುಖ್ಯ ಸಮಸ್ಯೆಗಳ ಬಗ್ಗೆ ಸಹ ಚರ್ಚಿಸಲಾಯಿತು.ಅದೇ ವೇಳೆ, ಇಲ್ಯಾಸ್ ನಗರ ಪ್ರದೇಶದಲ್ಲಿ ಅನಧಿಕೃತವಾಗಿ ಒಂದು ಮೊಬೈಲ್ ಟವರ್ ನಿರ್ಮಿಸಲಾಗುತ್ತಿರುವ ಕುರಿತು ಕೂಡ ಮನವಿ ಸಲ್ಲಿಸಲಾಯಿತು.
ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನುಬದ್ಧ ಅನುಮತಿ ಇಲ್ಲದೆ ನಡೆಯುತ್ತಿರುವ ಯಾವುದೇ ನಿರ್ಮಾಣ ಕಾರ್ಯವನ್ನು ತಕ್ಷಣವೇ ತಡೆಹಿಡಿಯಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಶೀಲನೆ ನಡೆಸಬೇಕು ಎಂದು ನಿವಾಸಿಗಳು ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ತುರ್ತು ಅಗತ್ಯವಿರುವ ಹಾಗೂ ಪ್ರಮುಖವಾಗಿರುವ ರಸ್ತೆಗಳು ಮತ್ತು ಚರಂಡಿ ಕಾಮಗಾರಿಗಳನ್ನು ಖಂಡಿತವಾಗಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹಂತ ಹಂತವಾಗಿ ಎಲ್ಲಾ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಲ್ಯಾಸ್ ನಗರ ನಿವಾಸಿಗಳು ಆಯುಕ್ತರ ಸ್ಪಂದನೆಗೆ ಧನ್ಯವಾದಗಳನ್ನು ಸಲ್ಲಿಸಿ, ನೀಡಿದ ಭರವಸೆಯಂತೆ ಶೀಘ್ರದಲ್ಲೇ ಕಾಮಗಾರಿಗಳು ಆರಂಭವಾಗಲಿ ಎಂದು ಆಶಿಸಿದರು.



