ಶಿರಸಿ | ಉಪನ್ಯಾಸಕನ ಮಹತ್ವದ ಸಾಧನೆ ; 1.25 ಕೋಟಿ ರೂ. ಅನುದಾನದ ಸಂಶೋಧನಾ ಯೋಜನೆಗೆ, ರಾಜ್ಯ ಸರ್ಕಾರ ಒಪ್ಪಿಗೆ

ಉತ್ತರ ಕನ್ನಡ

ಶಿರಸಿ: ಇಲ್ಲಿನ ಎಂ.ಇ.ಎಸ್. ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರೊಬ್ಬರು ಮಂಡಿಸಿದ ವಿನೂತನ ಸಂಶೋಧನಾ ಯೋಜನೆಗೆ ರಾಜ್ಯ ಸರ್ಕಾರವು ಬರೋಬ್ಬರಿ 1.25 ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸುವ ಮೂಲಕ, ಶಿರಸಿಯ ಶೈಕ್ಷಣಿಕ ಕ್ಷೇತ್ರಕ್ಕೆ ಹೆಮ್ಮೆಯ ಗರಿ ಮೂಡಿಸಿದೆ.

ಶಿರಸಿಯ ಎಂ.ಇ.ಎಸ್. ಪಾಲಿಟೆಕ್ನಿಕ್‌ನ ಉಪನ್ಯಾಸಕ ವೆಂಕಟೇಶ್ ಬಡಿಗೇರ ಹಾಗೂ ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್‌ನ ರಂಜಿತ್ ಗೌಡ ಅವರು ಜಂಟಿಯಾಗಿ ರೂಪಿಸಿದ ಯೋಜನೆಗೆ ಈ ಮನ್ನಣೆ ದೊರೆತಿದೆ.

ಏನಿದು ಉಪನ್ಯಾಸಕರ ಸಂಶೋಧನೆ?

ವೆಂಕಟೇಶ್ ಬಡಿಗೇರ ಅವರು ‘ಫೋಟೋನಿಕ್ಸ್ ಸೆನ್ಸಾರ್’ (Photonics Sensor) ತಂತ್ರಜ್ಞಾನದ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದರು. ಇವರು ರೂಪಿಸಿದ ತಂತ್ರಜ್ಞಾನದಿಂದ ಮಲೇರಿಯಾ ರೋಗಕ್ಕೆ ಕಾರಣವಾಗುವ ‘ಪ್ಲಾಸ್ಮೋಡಿಯಂ ಪ್ಯಾರಾಸೈಟ್’ ಹಾಗೂ ಅಪಾಯಕಾರಿ ‘ಕ್ಯಾನ್ಸರ್ ಕೋಶ’ಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ.

ರಾಜ್ಯ ಮಟ್ಟದ ಗುರುತಿಸುವಿಕೆ:

ಕರ್ನಾಟಕ ಸರ್ಕಾರದ ಐಟಿ-ಬಿಟಿ ಇಲಾಖೆಯ ಅಡಿಯಲ್ಲಿ ಬರುವ ‘ಕರ್ನಾಟಕ ಇನ್ನೋವೇಶನ್ ಆಂಡ್ ಸೊಸೈಟಿ’ (KITS), ಈ ಯೋಜನೆಯ ಮಹತ್ವವನ್ನು ಅರಿತು ಇದನ್ನು ‘ಇನ್ನೋವೇಶನ್ ಲ್ಯಾಬ್’ ಎಂದು ಪರಿಗಣಿಸಿದೆ. ಅಲ್ಲದೆ, ಈ ಸಂಶೋಧನೆಗೆ ಅಗತ್ಯವಿರುವ ಪ್ರಯೋಗಾಲಯ (Biotech Lab) ಸ್ಥಾಪನೆಗೆ 1.25 ಕೋಟಿ ರೂ. ಬಿಡುಗಡೆ ಮಾಡಿದೆ.

ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕಿ ಮಂಜುಶ್ರೀ ಎನ್. ಅವರು ಶಿರಸಿಯ ಉಪನ್ಯಾಸಕ ವೆಂಕಟೇಶ್ ಬಡಿಗೇರ್ ಅವರನ್ನು ಅಭಿನಂದಿಸಿದ್ದು, ಫೆಬ್ರವರಿ 9 ರಂದು ಬೆಂಗಳೂರಿಗೆ ಬಂದು ಯೋಜನೆಯ ಅನುಷ್ಠಾನದ ಕುರಿತು ಚರ್ಚಿಸಲು ಆಹ್ವಾನಿಸಿದ್ದಾರೆ.

Author