ದುಬೈ ಬಿಗ್ ಟಿಕೆಟ್ ಲಕ್ಕಿ ಡ್ರಾ ; ಉಡುಪಿಯ ಯುವಕನಿಗೆ ಭರ್ಜರಿ 49 ಕೋಟಿ ರೂ. ಲಾಟರಿ

ಉಡುಪಿ

ಉಡುಪಿ, ದುಬೈನ ಪ್ರತಿಷ್ಠಿತ ಲಾಟರಿಯಾದ ಬಿಗ್ ಟಿಕೆಟ್ ನ ಲಕ್ಕಿ ಡ್ರಾದಲ್ಲಿ ಉಡುಪಿಯ ಯುವಕನಿಗೆ ಭರ್ಜರಿ 49 ಕೋಟಿ ರೂ. ಬಹುಮಾನ ಸಿಕ್ಕಿದೆ.

ಓಮನ್​​​ನಲ್ಲಿ ಚಿಲ್ಲರೆ ವ್ಯಾಪಾರದ ಸೇಲ್ಸ್​​ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಉಡುಪಿಯ ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗಾರ್ ಅವರಿಗೆ ಬರೋಬ್ಬರಿ 49 ಕೋಟಿ ರೂ. ಲಾಟರಿ ಹೊಡೆದಿದೆ.

33 ವರ್ಷದ ಶಾಂತನು ಅವರು ಓಮನ್​​​ನಲ್ಲಿ ರಿಟೇಲ್‌ ವಲಯದ ಉದ್ಯೋಗದಲ್ಲಿದ್ದು, ಇದೇ ಜನವರಿ 20ರಂದು ಬಿಗ್‌ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು.

ಫೆ.3ರಂದು ಬಿಗ್‌ ಟಿಕೆಟ್ ಡ್ರಾ ಆಗಿದ್ದು, ಇದರಲ್ಲಿ ಶಂತನು ಅವರಿಗೆ ಅದೃಷ್ಟ ಖುಲಾಯಿಸಿದೆ.
ಶಾಂತನು ತನ್ನ ಸ್ನೇಹಿತನ ಜೊತೆ ಸೇರಿ ಈ ಟಿಕೆಟ್ ಖರೀದಿಸಿದ್ದರು.

ಹೀಗಾಗಿ ಬಹುಮಾನವನ್ನು ಸಹ ಸ್ನೇಹಿತನ ಜೊತೆ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ.
ಒಟ್ಟು 49 ಕೋಟಿ ರೂಪಾಯಿನಲ್ಲಿ ಇಬ್ಬರೂ ತಲಾ 24.5 ಕೋಟಿ ರೂ. ಹಂಚಿಕೊಳ್ಳಲು ನಿರ್ಧರಿಸಿರುವುದಾಗಿ ಸ್ವತಃ ಶಾಂತನು ಹೇಳಿಕೊಂಡಿದ್ದಾರೆ.

2021ರಿಂದಲೂ ಬಿಗ್‌ ಟಿಕೆಟ್‌ ರಾಫಲ್‌ಗಳಲ್ಲಿ ಭಾಗವಹಿಸುತ್ತಿದ್ದೆ. ಈ ಗೆಲುವು ತುಂಬಾ ಅನಿರೀಕ್ಷಿತವಾಗಿತ್ತು. ನನಗೆ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದಿರುವ ಶಾಂತನು, ಬಹುಮಾನದಿಂದ ಬಂದ ಹಣವನ್ನು ಹೇಗೆ ಬಳಸಬೇಕೆಂದು ಇದುವರೆಗೆ ಯೋಚಿಸಿಲ್ಲ ಎಂದಿದ್ದಾರೆ.

1992ರಲ್ಲಿ ಯುಎಇನಲ್ಲಿ ಈ ಬಿಗ್‌ ಟಿಕೆಟ್‌ ಲಕ್ಕಿ ಡ್ರಾ ಪ್ರಾರಂಭವಾಯಿತು. ಆರಂಭದಲ್ಲಿ ಸುಮಾರು 2 ಕೋಟಿ ರೂ.ನಿಂದ ಆರಂಭವಾದ ಲಾಟರಿ ಇದೀಗ 49 ಕೋಟಿ ರೂ.ಗೆ ಏರಿಕೆಯಾಗಿದ್ದು, ದೇಶದ ಪ್ರಮುಖ ಲಾಟರಿ ಡ್ರಾಗಳಲ್ಲಿ ಒಂದೆನಿಸಿಕೊಂಡಿದೆ.

Author