ತೀರ್ಥಹಳ್ಳಿ,ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಈ ಬಾರಿ ಫೆಬ್ರವರಿ 17, ರಿಂದ 25 ರ ವರೆಗೆ ಅತ್ಯಂತ ಅದ್ದೂರಿಯಾಗಿ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾಗರಾಜ್ ಶೆಟ್ಟಿ ಅವರು ಮಾಹಿತಿ ಹಂಚಿಕೊಂಡಿದ್ದು, ಫೆಬ್ರವರಿ 17 ರಂದು ಜಾತ್ರೆ ಸಾರುವ ಮೂಲಕ ಉತ್ಸವಕ್ಕೆ ಚಾಲನೆ ಸಿಗಲಿದೆ.
ಅಂದಿನಿಂದ ಪ್ರತಿದಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಫೆಬ್ರವರಿ 24 ರಂದು ದೇವಿಯ ಗೊಂಬೆಯನ್ನು ಕೂರಿಸುವ ಶಾಸ್ತ್ರ ಜರುಗಲಿದ್ದು, ಫೆಬ್ರವರಿ 25 ರಂದು ಗೊಂಬೆ ವಿಸರ್ಜನೆಯೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದಿದ್ದಾರೆ.
ಜಾತ್ರೆಯ ಅಂಗವಾಗಿ ಫೆಬ್ರವರಿ 18 ರಂದು ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆಯ ನಂತರ ಸಂಜೆ ಸುಮುಖ ಮತ್ತು ರಾಜರಾಜೇಶ್ವರಿ ನೃತ್ಯ ಶಾಲೆಯ ಕಲಾವಿದರಿಂದ ‘ನೃತ್ಯ ಸಂಗಮ’ ಪ್ರದರ್ಶನಗೊಳ್ಳಲಿದೆ. ಫೆಬ್ರವರಿ 19 ರಂದು ಖ್ಯಾತ ಯಕ್ಷಗಾನ ಕಲಾವಿದ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳದಿಂದ ‘ಸಂಪೂರ್ಣ ದೇವಿ ಮಹಾತ್ಮೆ’ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
ಫೆಬ್ರವರಿ 20 ರಂದು ಸುಶ್ರಾವ್ಯ ಸಂಗೀತದೊಂದಿಗೆ ಬಣ್ಣದ ಚಿತ್ತಾರದ ಅನಾವರಣವಾದ ಕಾವ್ಯ-ಸಂಗೀತ-ಕಲಾಕುಂಚ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಭಕ್ತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿ ಮನವಿ ಮಾಡಿದೆ.



