ಮಂಗಳೂರು, ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್, ಮಂಗಳೂರು (KPT) ದೇಶದ ತಾಂತ್ರಿಕ ಶಿಕ್ಷಣ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. 78 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಈ ಸಂಸ್ಥೆ, ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (AICTE) ವತಿಯಿಂದ ಸ್ವಾಯತ್ತ (Autonomous) ಸ್ಥಾನಮಾನ ಪಡೆದಿರುವ ದೇಶದ ಮೊದಲ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಎಂಬ ಅಪರೂಪದ ಗೌರವಕ್ಕೆ ಪಾತ್ರವಾಗಿದೆ.
1946ರಲ್ಲಿ ಸ್ಥಾಪನೆಯಾದ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್, ಆರಂಭದಲ್ಲಿ ಆಟೋಮೊಬೈಲ್, ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಬ ಮೂರು ಕೋರ್ಸ್‌ಗಳೊಂದಿಗೆ ತನ್ನ ಶೈಕ್ಷಣಿಕ ಪಯಣ ಆರಂಭಿಸಿತು. ಕಾಲಕ್ರಮೇಣ ತಾಂತ್ರಿಕ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ರೂಪಾಂತರಗೊಂಡ ಈ ಸಂಸ್ಥೆ, ಇಂದು ಎಂಟು ಡಿಪ್ಲೋಮಾ ಕೋರ್ಸ್‌ಗಳನ್ನು ನಡೆಸುತ್ತಿದೆ.
ಆಟೋಮೊಬೈಲ್, ಕೆಮಿಕಲ್, ಸಿವಿಲ್, ಕಂಪ್ಯೂಟರ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಮತ್ತು ಪಾಲಿಮರ್ ಕೋರ್ಸ್‌ಗಳ ಮೂಲಕ ಕೆಪಿಟಿ ಕರಾವಳಿ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಬದುಕಿನ ಬಾಗಿಲು ತೆರೆದಿದೆ.ಕೆಪಿಟಿಯ ವಿಶೇಷತೆ ಎಂದರೆ, ಕೆಮಿಕಲ್ ಡಿಪ್ಲೋಮಾ ಕೋರ್ಸ್ ಕರ್ನಾಟಕದಲ್ಲಿ ಕೇವಲ ಎರಡು ಸ್ಥಳಗಳಲ್ಲಿ (ಬೆಂಗಳೂರು ಮತ್ತು ಮಂಗಳೂರು) ಮಾತ್ರ ಲಭ್ಯವಿರುವುದು.

ಅದಕ್ಕೂ ಮೀರಿದ ವೈಶಿಷ್ಟ್ಯವೆಂದರೆ, ಪಾಲಿಮರ್ ಎಂಜಿನಿಯರಿಂಗ್ ಡಿಪ್ಲೋಮಾ ಕೋರ್ಸ್ ರಾಜ್ಯದಲ್ಲಿ ಕೇವಲ ಕೆಪಿಟಿಯಲ್ಲೇ ಲಭ್ಯವಿರುವುದು.
ಇದು ಸಂಸ್ಥೆಯ ಶೈಕ್ಷಣಿಕ ದೃಷ್ಟಿಕೋನ ಮತ್ತು ಕೈಗಾರಿಕಾ ಅಗತ್ಯಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ತೋರಿಸುತ್ತದೆ.ಸುಮಾರು ಎಂಟು ದಶಕಗಳ ಕಾಲ ಸರ್ಕಾರಿ ವ್ಯವಸ್ಥೆಯೊಳಗೆ ಕಾರ್ಯನಿರ್ವಹಿಸಿದ್ದ ಕೆಪಿಟಿ, 2025ರಲ್ಲಿ ಸ್ವಾಯತ್ತ ಸ್ಥಾನಮಾನ ಪಡೆಯುವ ಮೂಲಕ ಹೊಸ ಹಂತಕ್ಕೆ ಕಾಲಿಟ್ಟಿದೆ.
ಇದರಿಂದ ಕಾಲೇಜಿಗೆ ಸಿಲಬಸ್ ರೂಪಿಸುವುದು, ಪಠ್ಯಕ್ರಮವನ್ನು ನವೀಕರಿಸುವುದು, ಮೌಲ್ಯಮಾಪನ ವಿಧಾನಗಳನ್ನು ಬದಲಿಸುವುದು ಸೇರಿದಂತೆ ಹಲವು ಶೈಕ್ಷಣಿಕ ನಿರ್ಣಯಗಳಲ್ಲಿ ಸ್ವತಂತ್ರತೆ ಲಭಿಸಿದೆ.
ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ತ್ವರಿತ ಬದಲಾವಣೆಗಳು ನಡೆಯುತ್ತಿರುವ ಈ ಕಾಲಘಟ್ಟದಲ್ಲಿ, ಈ ಸ್ವಾಯತ್ತತೆ ಅತ್ಯಂತ ಮಹತ್ವದ್ದಾಗಿದೆ.



