ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇತಿಹಾಸ ಪ್ರಸಿದ್ಧ ಸಾಗರದ ಮಾರಿಕಾಂಬಾ ದೇವಿಯ ಜಾತ್ರೆಯು ಫೆಬ್ರವರಿ 3 ರಿಂದ ಫೆಬ್ರವರಿ 11ರವರೆಗೆ ನಡೆಯಲಿದ್ದು, ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನ ಇದಕ್ಕೆ ಸಕಲ ಸಿದ್ದತೆಯನ್ನು ಮಾಡಿ ಕೊಂಡಿದೆ.
ಈಗಾಗಲೆ ದೇವಸ್ಥಾನ ಪ್ರಮುಖ ಆಕರ್ಷಣೆ ಎಂದೆ ಗುರುತಿಸಿಕೊಂಡಿರುವ ಗಂಡನ ಮನೆ ದೇವಸ್ಥಾನದ ಗೋಪುರ ಬಣ್ಣದಿಂದ ಸಿಂಗಾರಗೊಂಡು ಭಕ್ತರನ್ನು ಆಕರ್ಷಿಸುತ್ತಿದ್ದರೇ, ವಿಶೇಷವಾಗಿ ರಾಜಸ್ತಾಮ ಜೋದ್‌ಪುರ್ ಶೈಲಿಯ ಮಂಟಪ ನಿರ್ಮಾಣವಾಗಿ ಅಮ್ಮ ಗದ್ದುಗೆ ಏರುವ ಕ್ಷಣ ಹತ್ತಿರ ಬರುತ್ತಿದೆ.
ಜಾನಪದದ ಲೇಪನ ಇರುವ ಜಾತ್ರೆ :
ಸಾಗರದ ಮಾರಿಕಾಂಬಾ ಜಾತ್ರೆ ಎಂದರೆ ಅದಕ್ಕೊಂದು ಜನಪದದ ಟಚ್ ಇರುತ್ತದೆ. ಜಾತ್ರೆ ಆರಂಭದಿಂದ ಅಮ್ಮನನ್ನು ವನಕ್ಕೆ ಬಿಡುವ ತನಕ ನಡೆಯುವ ಬಹುತೇಕ ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿ ಎತ್ತಿಹಿಡಿಯುವ ನಿಟ್ಟಿನಲ್ಲಿ ನಮ್ಮ ಹಿರಿಯರು ಹೆಣೆದು ಕೊಟ್ಟಿದ್ದಾರೆ. ಪ್ರತಿಯೊಂದು ಆಚರಣೆಯೂ ನಮ್ಮ ಜಾನಪದ ಶೈಲಿಯೊಂದಿಗೆ ಹೆಣೆದು ಕೊಂಡಿರುವುದು ವಿಶೇಷ.
ಇಂದು ಅಮ್ಮನವರ ಆಗಮನ :
ಫೆಬ್ರವರಿ 3ರ ಮಂಗಳವಾರ ತವರು ಮನೆ ದೇವಸ್ಥಾನದಲ್ಲಿ ಅಮ್ಮನವರ ಪ್ರತಿಷ್ಟಾಪನೆ ನಡೆಯಲಿದೆ. ಇದಕ್ಕೆ ಬೇಕಾದ ಪೂರ್ವಸಿದ್ದತೆ ನಡೆದಿದೆ. ಸೋಮವಾರ ರಾತ್ರಿಯಿಂದಲೇ ವಿಶೇಷ ಪೂಜೆ ನಡೆಯಲಿದ್ದು, ಅಮ್ಮನವರಿಗೆ ತೊಡಿಸುವ ಆಭರಣ, ಖತ್ತಿ, ಪಾದುಕೆ ಸೇರಿ ವಿವಿಧ ವಸ್ತುಗಳ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಪೋತರಾಜನ ಆವಾಹನೆಯೊಂದಿಗೆ ವಿಶೇಷ ಪೂಜೆ ನಡೆಯಲಿದ್ದು, ಆ ದಿನ ಬೆಳಿಗ್ಗೆಯಿಂದ ರಾತ್ರಿಯವರೆಗೆ ತವರುಮನೆ ದೇವಸ್ಥಾನದಲ್ಲಿ ಅಮ್ನನವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾತ್ರಿ 9ರ ನಂತರ ಅಮ್ಮನವರ ವಿಶೇಷ ಮೆರವಣಿಗೆ ಇದ್ದು, ಇದಕ್ಕಾಗಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ವಿಶೇಷ ರಥವನ್ನು ನಿರ್ಮಿಸಲಾಗಿದೆ.
ಫೆ. 4ರಿಂದ ದರ್ಶನ :
ಫೆಬ್ರವರಿ 4ರಿಂದ 11ರವರೆಗೆ ಗಂಡನಮನೆ ದೇವಸ್ಥಾನದ ಎದುರು ನಿರ್ಮಿಸಿರುವ ಭವ್ಯ ಮಂಟಪದಲ್ಲಿ ಮಾರಿಕಾಂಬಾ ದೇವಿ ಪ್ರತಿಷ್ಟಾಪನೆಗೊಳ್ಳಲಿದ್ದು, ಇದಕ್ಕಾಗಿ ವಿಶೇಷ ಗದ್ದುಗೆ ನಿರ್ಮಿಸಿದೆ. ಕದಂಬ ಶೈಲಿಯಲ್ಲಿ ಈ ಬಾರಿ ಮಂಟಪವನ್ನು ರಚಿಸಲಾಗಿದ್ದು, ದಶಾವತಾರ ಸಾರುವ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗಿದ್ದು ವಿಶೇಷ ದೀಪಾಲಂಕಾರ ಎಲ್ಲರನ್ನು ಸೆಳೆಯುತ್ತಿದೆ.
ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿವರೆಗೆ ಅಮ್ಮನವರ ದರ್ಶನ, ಪೂಜೆಗೆ ಅವಕಾಶವಿದೆ.
ಅನ್ನ ಸಂತರ್ಪಣೆ :
ಮಾರಿಕಾಂಬಾ ಸಮಿತಿಯಿಂದ ಒಂಬತ್ತು ದಿನಗಳ ಭಕ್ತಾದಿಗಳಿಗೆ ಊಟದ ವ್ಯವಸ್ಥೆಯನ್ನು ವೀರಶೈವ ಕಲ್ಯಾಣ ಮಂಟಪದಲ್ಲಿ ಮಾಡಲಾಗಿದೆ. ಪ್ರತಿದಿನ ಮಧ್ಯಾಹ್ನ 1ರಿಂದ 3ರವರೆಗೆ ರಾತ್ರಿ 8ರಿಂದ 1೦ರವರೆಗೆ ಊಟದ ವ್ಯವಸ್ಥೆಯನ್ನು ಸಮಿತಿ ಮಾಡಿದೆ.
ಸಾಂಸ್ಕೃತಿಕ ಕಾರ್ಯಕ್ರಮ :
ನಗರಸಭೆ ಆವರಣದ ಗಾಂಧಿಮೈದಾನದಲ್ಲಿ ಫೆ. 4ರಿಂದ ಫೆ. 11ರವರೆಗೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಇರುತ್ತದೆ. ನಾಡಿನ ಹೆಸರಾಂತ ಕಲಾವಿದರು ಮಾರಿಕಾಂಬಾ ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾ ಪ್ರದರ್ಶನ ನೀಡಲಿದ್ದು, ಇದರ ಜೊತೆಗೆ ಸ್ಥಳೀಯ ಕಲಾವಿದರಿಗೆ, ಸಾಹಸ ಕ್ರೀಡೆಗಳಿಗೆ ವೇದಿಕೆ ಕಲ್ಪಿಸಲಾಗಿದೆ. 8 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ :
ಮಾರಿಕಾಂಬಾ ಜಾತ್ರೆಯ ವಿಶೇಷಗಳಲ್ಲಿ ಒಂದಾಗಿರುವ ರಾಷ್ಟ್ರಮಟ್ಟದ ಬಯಲು ಕುಸ್ತಿ ಪಂದ್ಯಾವಳಿ ಫೆ. 6ರಿಂದ 8ರವರೆಗೆ ಚರ್ಚ್ ಎದುರಿನ ನೆಹರೂ ಮೈದಾನದಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ, ಒಲಿಂಪಿಕ್ಸ್ ಸೇರಿದಂತೆ ದೊಡ್ಡದೊಡ್ಡ ಪಂದ್ಯಾವಳಿಯಲ್ಲಿ ಕಣಕ್ಕೆ ಇಳಿದ ಕುಸ್ತಿಪಟುಗಳು ಪಾಲ್ಗೊಳ್ಳಲಿದ್ದಾರೆ.

ಶಾಸಕರ ಮಾರ್ಗದರ್ಶನದಲ್ಲಿ ವ್ಯವಸ್ಥೆ :
ಪ್ರತಿವರ್ಷ ಅಮ್ಮನವರ ದರ್ಶನಕ್ಕೆ ನೂಕುನುಗ್ಗಲು ಉಂಟಾಗುತ್ತಿರುವುದನ್ನು ಮನಗಂಡು ಶಾಸಕ ಗೋಪಾಲಕೃಷ್ಣ ಬೇಳೂರು ಈ ಬಾರಿ ವಿಶೇಷ ಬಂದೋಬಸ್ತು ವ್ಯವಸ್ಥೆ ಕಲ್ಪಿಸಿದ್ದು, ಹೆಚ್ಚುವರಿ ಪೊಲೀಸರನ್ನು ನೇಮಿಸಲು ಸಿದ್ದತೆ ನಡೆಸಿದ್ದಾರೆ. ಮಾರಿಕಾಂಬಾ ಸಮಿತಿ ಸಹ ಜಾತ್ರೆ ಯಶಸ್ಸಿಗೆ ಅಗತ್ಯ ಸಿದ್ದತೆ ಮಾಡಿಕೊಂಡಿದೆ.
ನಗರವ್ಯಾಪ್ತಿಯಲ್ಲಿ 6೦ಕ್ಕೂ ಹೆಚ್ಚು ರಸ್ತೆಗಳ ಡಾಂಬಾರೀಕಣ ಮಾಡಲಾಗುತ್ತಿದ್ದು, ನಗರಸಭೆಯಿಂದ ಕುಡಿಯುವ ನೀರು ಮತ್ತು ಸ್ವಚ್ಚತೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಶಾಸಕರ ಸೂಚನೆಯಂತೆ ಜಾತ್ರೆಯಿಂದ ಬರುವ ಆದಾಯವನ್ನು ಕಲ್ಯಾಣ ಮಂಟಪ ಹಾಗೂ ಶಾಲೆ ನಿರ್ಮಿಸಲು ಚಿಂತನೆ ನಡೆಸಿ, ಇದಕ್ಕಾಗಿ ಶಂಕುಸ್ಥಾಪನೆ ಸಹ ನೆರವೇರಿದೆ.
ಒಟ್ಟಾರೆ ಸಾಗರದ ಮಾರಿಕಾಂಬಾ ದೇವಿ ಜಾತ್ರೆ ಧಾರ್ಮಿಕವಾಗಿ, ಜನಪದೀಯವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹೊಸ ಮನ್ವಂತರ ಸೃಷ್ಟಿ ಮಾಡುತ್ತಿದ್ದು ಅಗತ್ಯ ವ್ಯವಸ್ಥೆ ಸಮಿತಿ ಮಾಡಿದೆ. ಹಿಂದಿನ ಎಲ್ಲ ವರ್ಷಗಳ ದಾಖಲೆಯನ್ನು ಮುರಿಯುವ ನಿಟ್ಟಿನಲ್ಲಿ ಈ ಬಾರಿ ಜಾತ್ರಾ ಸಿದ್ದತೆಗಳು ನಡೆಯುತ್ತಿದ್ದು ಸುಮಾರು 3೦ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇರಿಸಿಕೊಂಡು ವೇದಿಕೆ ಸಜ್ಜಾಗುತ್ತಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಟಿ ನಡೆಸಿದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನ ಜಾತ್ರೆಗೆ ನಡೆದಿರುವ ಸಿದ್ದತೆ ತಿಳಿಸಿದೆ.
ಸಮಿತಿಯ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಸುಂದರ ಸಿಂಗ್, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಕೋಶಾಧ್ಯಕ್ಷ ನಾಗೇಂದ್ರ ಕುಮಟಾ, ಸಾಂಸ್ಕೃತಿಕ ಸಮಿತಿ ಸಹ ಸಂಚಾಲಕ ಲೋಕೇಶ ಕುಮಾರ್, ಪ್ರಚಾರ ಸಮಿತಿ ಸಂಚಾಲಕ ರವಿನಾಯ್ಡು, ಗೋಪುರ ಸಮಿತಿ ಸಂಚಾಲಕ ಪುರುಷೋತ್ತಮ, ಸೋಮಶೇಖರ ಅರಮನೆಕೇರಿ ಇನ್ನಿತರರು ಹಾಜರಿದ್ದರು.
ಜಾತ್ರೆ ಬಂದೋಬಸ್ತಿಗಾಗಿ ಒಟ್ಟು 5೦೦ ಅಧಿಕಾರಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಸಾರಿಗೆ ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಗಮನ ಹರಿಸಿದೆ. ಬಂದೋಬಸ್ತ್ತ್ ಹಿನ್ನೆಲೆಯಲ್ಲಿ 3 ಡಿವೈಎಸ್‌ಪಿ, 7 ಸರ್ಕಲ್ ಇನ್ಸ್‌ಪೆಕ್ಟರ್, 12 ಸಬ್ ಇನ್ಸ್‌ಪೆಕ್ಟರ್, 44 ಎ.ಎಸ್‌ಐ, 194 ಪೊಲೀಸರು, ೩೭ ಮಹಿಳಾ ಪೊಲೀಸರು, 2೦೦ ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಎಲ್ಲಾ ಕಡೆಯೂ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸೂಚನೆ : ಭಕ್ತರು ಜಾತ್ರೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಡಾ|| ಬೆನಕಪ್ರಸಾದ್. ಎಎಸ್ ಪಿ ತಿಳಿಸಿದ್ದಾರೆ.



