ಕೇಂದ್ರದ ಬಜೆಟ್, ದೇಶಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ : ಬಿ. ವೈ. ವಿಜಯೇಂದ್ರ

ಶಿವಮೊಗ್ಗ

ಶಿವಮೊಗ್ಗ,ಕೇಂದ್ರ ಹಣಕಾಸು ಸಚಿವರು ಮಂಡಿಸಿದ 9ನೇ ಬಜೆಟ್ ಆತ್ಮನಿರ್ಭರ ಭಾರತ, ವಿಕಸಿತ ಭಾರತ ಹಾಗೂ ಸ್ವಾವಲಂಬಿ ಭಾರತದ ನಿರ್ಮಾಣದ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದ್ದು, ದೇಶಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ ಜನಪ್ರಿಯತೆಯ ಲೆಕ್ಕಾಚಾರಕ್ಕಲ್ಲ, ರಾಷ್ಟ್ರದ ದೀರ್ಘಕಾಲೀನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದರು.

ಜಾಗತಿಕ ಆರ್ಥಿಕ ಅಸ್ಥಿರತೆಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಧೈರ್ಯಶಾಲಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ.

ಕೈಗಾರಿಕೆ, ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ ಸೇರಿದಂತೆ ಎಲ್ಲ ವಲಯಗಳಿಗೂ ಸಮಾನ ಆದ್ಯತೆ ನೀಡಲಾಗಿದ್ದು, ಆರ್ಥಿಕ ಶಿಸ್ತನ್ನು ಕಟ್ಟುನಿಟ್ಟಾಗಿ ಕಾಪಾಡಲಾಗಿದೆ ಎಂದು ಹೇಳಿದರು.

ಹಿಂದಿನ ಆರ್ಥಿಕ ವರ್ಷದಲ್ಲಿ ಹಣಕಾಸು ಕೊರತೆಯನ್ನು 4.4 ಶೇಕಡಕ್ಕೆ ಇಳಿಸಲಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮೂಲಭೂತ ಸೌಕರ್ಯಗಳಿಗೆ ಅಲ್ಪ ಅನುದಾನ ನೀಡಲಾಗುತ್ತಿದ್ದರೆ, ಎನ್‌ಡಿಎ ಸರ್ಕಾರದ ಕಾಲದಲ್ಲಿ ರಸ್ತೆ, ರೈಲು, ಬಂದರು ಹಾಗೂ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಇತಿಹಾಸದಲ್ಲೇ ಅತ್ಯಧಿಕ ವೆಚ್ಚ ಮಾಡಲಾಗಿದೆ.

ರೈತರ ಆದಾಯ ದ್ವಿಗುಣಗೊಳಿಸುವ ದಿಕ್ಕಿನಲ್ಲಿ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಆಹಾರ ಮತ್ತು ವಾಣಿಜ್ಯ ಮೀನುಗಾರಿಕೆಗೆ ಶೇ.6ರಷ್ಟು ಹೆಚ್ಚುವರಿ ಅನುದಾನ ಒದಗಿಸಲಾಗಿದೆ ಎಂದು ವಿವರಿಸಿದರು.

ಯುವಕರು, ಬಡವರು, ರೈತರು ಮತ್ತು ಮಹಿಳೆಯರು ಎಂಬ ನಾಲ್ಕು ಪ್ರಮುಖ ವರ್ಗಗಳನ್ನು ಕೇಂದ್ರಬಿಂದುವಾಗಿ ಬಜೆಟ್ ರೂಪಿಸಲಾಗಿದೆ. ಮಹಿಳಾ ಉದ್ಯಮಶೀಲತೆಗೆ ‘ಶೀ ಮಾರ್ಟ್’ ಮೂಲಕ ಉತ್ತೇಜನ ನೀಡಲಾಗಿದ್ದು, ಪ್ರತೀ ಜಿಲ್ಲೆಯಲ್ಲಿ ಮಹಿಳಾ ಹಾಸ್ಟೆಲ್ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ.

ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಚೆನ್ನೈ–ಬೆಂಗಳೂರು ಹಾಗೂ ಹೈದ್ರಾಬಾದ್–ಬೆಂಗಳೂರು ಹೈಸ್ಪೀಡ್ ರೈಲು ಯೋಜನೆಗಳಿಗೂ ಬಜೆಟ್‌ನಲ್ಲಿ ಸ್ಪಷ್ಟ ಬೆಂಬಲ ನೀಡಲಾಗಿದೆ.

ತೆಂಗು, ಮೀನುಗಾರಿಕೆ ಮತ್ತು ಶ್ರೀಗಂಧ ಬೆಳೆಗಾರರಿಗೂ ವಿಶೇಷ ನೆರವು ಕಲ್ಪಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ಕಳೆದ ಎರಡೂವರೆ ವರ್ಷಗಳಿಂದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸುತ್ತಲೇ ಬಂದಿದೆ.

ರಾಜ್ಯದ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರದ ವಿರುದ್ಧ ಬೊಟ್ಟು ತೋರಿಸುವುದೇ ಕಾಂಗ್ರೆಸ್ ಸರ್ಕಾರದ ನಿತ್ಯದ ಕೆಲಸವಾಗಿದೆ ಎಂದು ಆರೋಪಿಸಿದರು.

16ನೇ ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ ಜಿಡಿಪಿಗೆ ಅನುಗುಣವಾಗಿ ಹೆಚ್ಚಿನ ಅನುದಾನ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಕರ್ನಾಟಕದ ಪಾಲು ಶೇ.3.65ರಿಂದ 4.13ಕ್ಕೆ ಹೆಚ್ಚಾಗಿದೆ.

ಇದರಿಂದ ಪ್ರತಿವರ್ಷ 7,387 ಕೋಟಿ ರೂ. ಹೆಚ್ಚುವರಿ ಅನುದಾನ ಸಿಗಲಿದ್ದು, ಮುಂದಿನ ವರ್ಷಕ್ಕೆ ಒಟ್ಟು 63,050 ಕೋಟಿ ರೂ. ರಾಜ್ಯಕ್ಕೆ ಲಭ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗದೀಶ್ ಎನ್ ಕೆ, ಒಬಿಸಿ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ಮಾಜಿ ಶಾಸಕರುಗಳಾದ ಎಸ್.ರುದ್ರೇಗೌಡ್ರು, ಅಶೋಕ ನಾಯ್ಕ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಾಲತೇಶ್, ಒಬಿಸಿ ಜಿಲ್ಲಾಧ್ಯಕ್ಷ ಸುಧಾಕರ್, ಮಾಧ್ಯಮ ಪ್ರಮುಖ್ ಎಸ್.ಚಂದ್ರಶೇಖರ್, ಸಹ ಪ್ರಮುಖ್ ಮಂಜುನಾಥ್ ಎನ್ ಉಪಸ್ಥಿತರಿದ್ದರು

Author