ಶಿವಮೊಗ್ಗ | ಎಟಿಎಂನಲ್ಲಿ ವೃದ್ಧನ ಕಾರ್ಡ್ ಬದಲಿಸಿ ; ಲಕ್ಷಾಂತರ ರೂಪಾಯಿ ವಂಚನೆ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಬಂದಿದ್ದ ವೃದ್ಧರೊಬ್ಬರ ಕಾರ್ಡ್ ಬದಲಿಸಿ , ಅವರ ಖಾತೆಯಿಂದ ಒಂದು ಲಕ್ಷ ಹಣ ದೋಚಿರುವ ಘಟನೆ ಭದ್ರಾವತಿಯ KSRTC ಬಸ್ ನಿಲ್ದಾಣದ ಮುಂಭಾಗದ ಎಟಿಎಂನಲ್ಲಿ ಜರುಗಿದೆ. ಜನವರಿ 12ರಂದು ಕೃತ್ಯ ನಡೆದಿದ್ದು ತಡವಾಗಿ ದೂರು ದಾಖಲಾಗಿದೆ.

ಸಿದ್ಧಾರೂಢನಗರದ ಸದಾಶಿವಪ್ಪ ಜಿ.ಕೆ ಅವರು ಹಣ ಡ್ರಾ ಮಾಡಲು ಕೆನರಾ ಬ್ಯಾಂಕ್ ಎಟಿಎಂಗೆ ತೆರಳಿದ್ದರು. ಈ ವೇಳೆ ಎಟಿಎಂನಿಂದ ಹಣ ಬಾರದೇ ಇದ್ದಾಗ, ಅಲ್ಲೇ ಇದ್ದ ಸುಮಾರು 25-30 ವರ್ಷದ ಅಪರಿಚಿತ ವ್ಯಕ್ತಿಯ ಸಹಾಯ ಕೇಳಿದ್ದಾರೆ. ಆ ವ್ಯಕ್ತಿಯು ಸದಾಶಿವಪ್ಪ ಅವರ ಎಟಿಎಂ ಕಾರ್ಡ್ ಪಡೆದು, ಪಾಸ್‌ವರ್ಡ್ ಗಮನಿಸಿ ಬಳಿಕ ಕಾರ್ಡ್ ಬದಲಿಸಿ ಬೇರೆ ಕಾರ್ಡ್ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಎಟಿಎಂ ಕಾರ್ಡ್‌ ಬದಲಾಗಿರುವುದನ್ನು ಅರಿಯದ ಸದಾಶಿವಪ್ಪ ಅವರು ಮನೆಗೆ ಹೋಗಿದ್ದಾರೆ. ಬಳಿಕ ಬ್ಯಾಂಕ್‌ನಲ್ಲಿ ಪರಿಶೀಲಿಸಿದಾಗ ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹1,18,700 ಹಣ ಡ್ರಾ ಮಾಡಿಕೊಂಡಿರುವುದು ಗೊತ್ತಾಗಿದೆ.

ವಂಚನೆ ಸಂಬಂಧ ಸದಾಶಿವಪ್ಪ ಅವರು ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Author