ಶಿವಮೊಗ್ಗ | ಶರಾವತಿ ಸಂತ್ರಸ್ತರ ಪರಿಹಾರ ಅಂತಿಮಘಟ್ಟಕ್ಕೆ ಬಂದಿದೆ : ಸಚಿವ ಖಂಡ್ರೆ

ಶಿವಮೊಗ್ಗ

ಶಿವಮೊಗ್ಗ, ಶರಾವತಿ ಸಂತ್ರಸ್ತರ ಪರಿಹಾರ ಅಂತಿಮಘಟ್ಟಕ್ಕೆ ಬಂದಿದೆ. ಕಂದಾಯ ಇಲಾಖೆ ಸಂತ್ರಸ್ತರನ್ನು ಗುರುತಿಸಿ ಅಂತಿಮ ಪಟ್ಟಿ ನೀಡಿದರೆ, ಹಕ್ಕುಪತ್ರ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರಿಂ ಕೋರ್ಟ್​ನಲ್ಲಿ ಶರಾವತಿ ಸಂತ್ರಸ್ತರ ಬಗ್ಗೆ ನಾವು ಮನವಿ ಸಲ್ಲಿಸಿದ್ದೆವು. ಈ ಬಗ್ಗೆ ಸುಪ್ರಿಂಕೋರ್ಟ್ ಕೇಂದ್ರ ಸರ್ಕಾರ ಮತ್ತು ಅರಣ್ಯ ಇಲಾಖೆ ಸೇರಿ ತೀರ್ಮಾನ ಮಾಡಬೇಕು ಎಂದಿದೆ. ಅದಕ್ಕೆ ಸಮ್ಮತಿ ಸಿಕ್ಕಿದೆ.

ನಮ್ಮ ಇಲಾಖೆಯವರು ಕಂದಾಯ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಕಂದಾಯ ಇಲಾಖೆಯ ತೀರ್ಮಾನದ ಮೇಲೆ ಅರ್ಹ ಸಂತ್ರಸ್ತರಿಗೆ 65 ವರ್ಷಗಳ ನಂತರ ಶಾಶ್ವತ ಹಕ್ಕುಪತ್ರ ನೀಡುವ ಕೆಲಸ ಆಗಲಿದೆ ಎಂದರು.

ಅರಣ್ಯಶಾಸ್ತ್ರ ವಿದ್ಯಾರ್ಥಿಗಳ ಬೇಡಿಕೆ ಈಡೇರಿಕೆಗೆ ಕ್ರಮ

ಅರಣ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಾವು ಅರಣ್ಯ ವಿದ್ಯಾರ್ಥಿಗಳ ಬೇಡಿಕೆಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದೇವೆ. ನೇಮಕಾತಿ ವಿಚಾರದಲ್ಲೂ ಅವರಿಗೆ ಅವಕಾಶ ಕಲ್ಪಿಸಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದು ಅಭಯ ನೀಡಿದರು.

ಸುಸ್ಥಿರ ಅಭಿವೃದ್ಧಿ,‌ ಪ್ರಕೃತಿಗೆ ತೊಂದರೆ ಆಗದಂತೆ ಅಭಿವೃದ್ಧಿ ಮಾಡಲಾಗುತ್ತದೆ. ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಸರ್ಕಾರ ಎಲ್ಲಾ‌ ಕ್ರಮ ತೆಗೆದುಕೊಳ್ಳುತ್ತಿದೆ. ಒಂದೇ‌ ಒಂದು ಮಾನವ ಹಾಗೂ ವನ್ಯಜೀವಿಯ ಜೀವಕ್ಕೆ ಹಾನಿಯಾಗಬಾರದೆಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತೇವೆ. ಆ ನಿಟ್ಟಿನಲ್ಲಿ ಕೆಲಸ‌ ಮಾಡುತ್ತೇವೆ ಎಂದು ತಿಳಿಸಿದರು.

15 ಪಶು ವೈದ್ಯರ ನೇಮಕಕ್ಕೆ ಸಿಎಂ ಒಪ್ಪಿಗೆ:

15 ಪಶು ವೈದ್ಯಾಧಿಕಾರಿಗಳನ್ನು ನೇಮಕಾತಿ ಮಾಡಲು ಸಿಎಂ ಅನುಮತಿ ನೀಡಿದ್ದಾರೆ. ಆರ್ಥಿಕ ಇಲಾಖೆ ಅನುಮತಿ ನೀಡಿದೆ. 6 ತಿಂಗಳ ಒಳಗೆ ನಿಯಮಾನುಸಾರ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ಅಲ್ಲಿವರೆಗೂ ತಾತ್ಕಾಲಿಕ ಹೊರ ಗುತ್ತಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಆನೆಗಳ ಅನಾರೋಗ್ಯದ ವರದಿ

ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳಿಗೆ ಅನಾರೋಗ್ಯ ಇರುವ ಕುರಿತು ನನಗೆ ಮಾಹಿತಿ ಬಂದ ತಕ್ಷಣ ಸಿಸಿಎಫ್ ಹನುಮಂತಪ್ಪ ಅವರಿಗೆ ಸೂಚನೆ ನೀಡಿ, ಪಶು ವೈದ್ಯರನ್ನು ಕಳುಹಿಸಿ ಆರೈಕೆ, ಚಿಕಿತ್ಸೆ ನೀಡಬೇಕು ಎಂದು ತಿಳಿಸಿದ್ದೆ. ವರದಿ ಬಂದಿದ್ದು, ಅದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ. ಆನೆ ಬಿಡಾರದಲ್ಲಿ ಆನೆ ಬಾಲದ ಕೂದಲು ಮಾರಾಟದ ಕುರಿತು ದೂರು ಬಂದಿದೆ. ಎಲ್ಲದರ ಮೇಲೂ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ. ಈ ಹಿಂದೆ ಯಾರ ಗಮನಕ್ಕೂ ಬರುತ್ತಿರಲಿಲ್ಲ. ಈಗ ಸರ್ಕಾರದ ಗಮನಕ್ಕೂ ಬರುತ್ತಿದೆ ಎಂದು ಸಚಿವರು ಹೇಳಿದರು.

ಶೆಟ್ಟಿಹಳ್ಳಿ ಡಿನೋಟಿಫಿಕೇಷನ್ ಕುರಿತು ಕ್ರಮ

ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಗುತ್ತಿದ್ದೇನೆ. ಶೆಟ್ಟಿಹಳ್ಳಿ ವನ್ಯಜೀವಿ ಧಾಮದ ಡಿನೋಟಿಫಿಕೇಷನ್ ಪ್ರಸ್ತಾವನೆ 2016ರಿಂದಲೂ ಪೆಂಡಿಂಗ್ ಇದ್ದು, ಈಗ ಅಂತಿಮ ಘಟ್ಟಕ್ಕೆ ಬಂದಿದೆ. 1974ರಲ್ಲಿ ಡಿನೋಟಿಫಿಕೇಷನ್ ಮಾಡಿದಾಗ 395 ಚದರ್​ ಕಿ.ಮೀ ಪ್ರದೇಶವನ್ನು ಸೇರ್ಪಡೆ ಮಾಡಿದ್ದರು. ಈಗ ಅದರಲ್ಲಿ ಬಸ್ ನಿಲ್ದಾಣ, ಎಪಿಎಂಸಿ ಜನವಸತಿ ಪ್ರದೇಶವೂ ಸೇರ್ಪಡೆಗೊಂಡಿದೆ. ಅದರ ‌ಪರಿಶೀಲನೆ ನಡೆಸಲಾಗಿದೆ.‌ ನಮ್ಮ ಅಧಿಕಾರಿಗಳು ಸಮೀಕ್ಷೆ ಮಾಡಿದ್ದಾರೆ. ಇದಕ್ಕಾಗಿ ಎರಡು ಮೂರು ಸಲ ಸಭೆ ನಡೆಸಲಾಗಿದೆ. ಶೆಟ್ಟಿಹಳ್ಳಿ ಅರಣ್ಯ ಎಷ್ಟಿದೆ ಎಂದು ಘೋಷಣೆ ಮಾಡಿ, ಸಂರಕ್ಷಣೆ ಮಾಡಬೇಕು ಎಂದರು.

ನಮಗೆ ಜೀವನ ಬೇಕು, ಜೀವನೋಪಾಯವೂ ಬೇಕು. ಮುಂದಿನ ಪೀಳಿಗೆ ಸುರಕ್ಷಿತವಾಗಿರಬೇಕು. ಆಡಳಿತಾತ್ಮಕ ಮತ್ತು ಕಾನೂನಾತ್ಮಕವಾಗಿಯೂ ಸಹ ಒಂದು ತೀರ್ಮಾನ ತೆಗೆದುಕೊಳ್ಳಬೇಕೆಂದು ಖುದ್ದಾಗಿ ಪರಿಶೀಲಿಸಲು ಬಂದಿದ್ದೇನೆ. ನಮ್ಮ ಜೊತೆ ಸ್ಥಳೀಯ ಶಾಸಕರು ಬಂದಿದ್ದಾರೆ. ಅಧಿವೇಶನ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗುತ್ತದೆ‌. ಈ ಕುರಿತು ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾವು ನ್ಯಾಯಯುತವಾಗಿ ತೀರ್ಮಾನ ಮಾಡುತ್ತೇವೆ. ತೀರ್ಮಾನದ ಬಗ್ಗೆ ನ್ಯಾಯಾಲಯಕ್ಕೂ ಮಾಹಿತಿ ಕೊಡುತ್ತೇವೆ. ನಾವು ಯಾವ ಕಾರಣಕ್ಕೆ, ಯಾವ ತೀರ್ಮಾನ ಮಾಡಿದ್ದೇವೆ ಹಾಗೂ ಅರಣ್ಯ ಸಂರಕ್ಷಣೆ ಮಾಡಿರುವ ಬಗ್ಗೆಯೂ ಸಹ ಮಾಹಿತಿ ನೀಡುತ್ತೇವೆ. ಪರಿಸರವೂ ಉಳಿಯಬೇಕು. ಅದರ ಜೊತೆಗೆ ಬಡರನ್ನು ರಕ್ಷಣೆ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ವಿವರಿಸಿದರು.

ಈ ವೇಳೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯ ನಾಯ್ಕ್, ಸಿಸಿಎಫ್ ಹನುಮಂತಪ್ಪ, ಕಾಂಗ್ರೆಸ್ ಮುಖಂಡ ಯೋಗೇಶ್ ಸೇರಿ ಹಲವರು ಉಪಸ್ಥಿತರಿದ್ದರು.

Author