ಶಿವಮೊಗ್ಗ | ನಾಡಗೀತೆಗೆ‌ ನೂರರ ಸಂಭ್ರಮ ; ನೂರು ವಿದ್ಯಾರ್ಥಿಗಳಿಂದ, ನೂರು ಕಂಠಗಳ ಸಿರಿ ಗಾಯನ

ಶಿವಮೊಗ್ಗ

ಶಿವಮೊಗ್ಗ,ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶರಾವತಿ ನಗರ, ಇಲ್ಲಿ ಕನ್ನಡ ರಾಜ್ಯೋತ್ಸವ, ನಾಡಗೀತೆಗೆ‌ ನೂರರ ಸಂಭ್ರಮ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಪೂಜ್ಯರ ಕೃಪಾಶೀರ್ವಾದದೊಂದಿಗೆ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ನಾಡಿನ ಪರಂಪರೆಯ ಹೆಮ್ಮೆಯನ್ನು ಪ್ರತಿಬಿಂಬಿಸುವ ಕುವೆಂಪು ರಚಿಸಿದ ನಾಡಗೀತೆಗೆ 100 ವರ್ಷ ತುಂಬಿದ ಸುಸಂದರ್ಭದಲ್ಲಿ ನೂರು ವಿದ್ಯಾರ್ಥಿಗಳ ನೂರು ಕಂಠಗಳ ಸಿರಿಯಿಂದ ಒಕ್ಕೂರಲ ಗಾಯನ ಮಾಡಲಾಯಿತು.

ಕನ್ನಡ ನಾಡಿನ ಕಂಪು ಎಲ್ಲೆಡೆ ಪಸರಿಸಲಿ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮವು ಆರಂಭಗೊಂಡಿದ್ದು, ಕನ್ನಡ ನಾಡು-ನುಡಿಗೆ ಅಪಾರ ಕೊಡುಗೆಯನ್ನು ನೀಡಿದ ಮಹಾನ್ ಕವಿಗಳ, ಜ್ಞಾನಪೀಠ ಪ್ರಶಸ್ತಿ ವಿಜೇತರ ವೇಷವನ್ನು ಧರಿಸಿದ ಮಕ್ಕಳೊಂದಿಗೆ ಪೂಜ್ಯ ಶ್ರೀಗಳ ಸಮ್ಮುಖದಲ್ಲಿ ಜಾಥಾ ನಡೆಸಲಾಯಿತು.

ವೇದಿಕೆ ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಪೂಜ್ಯರಾದ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು ಕಾರ್ಯಕ್ರಮದ‌ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದರು.

ಶಾಲೆಯ ಪ್ರಾಂಶುಪಾಲರಾದ ಕು. ದಿವ್ಯ ಕರಣಂ ಉಪಸ್ಥಿತರಿದ್ದರು.ಕನ್ನಡ ನಾಡು ನುಡಿಯ ಬಗ್ಗೆ ಹಾಗೂ ಕನ್ನಡ ನಿಮಗೆಷ್ಟು ಗೊತ್ತು? ಎಂಬ ವಿಚಾರವನ್ನು ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿರುವ ಪೂಜ್ಯಶ್ರೀಗಳು ಆಶೀರ್ವಚನ ನೀಡುವ ಸಂದರ್ಭದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳ ಮಹತ್ವವನ್ನು ಸಂಕ್ಷಿಪ್ತವಾಗಿ ತಿಳಿಸಿದರು.

ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.ಈ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮೀಜಿಯವರು, ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Author