ಶಿವಮೊಗ್ಗ | ಹೊಸ ಜಿಲ್ಲಾಸ್ಪತ್ರೆ, ಕುವೆಂಪು ವಿವಿಯಲ್ಲಿ ಪರಿಶಿಷ್ಟರಿಗೆ ಹಾಸ್ಟೆಲ್ ಕಲ್ಪಿಸಿ : ಡಿಎಸ್ಸೆಸ್ ನಾಯಕ ಗುರುಮೂರ್ತಿ ಆಗ್ರಹ

ಶಿವಮೊಗ್ಗ

ಶಿವಮೊಗ್ಗ, ನಗರಕ್ಕೆ ಹತ್ತು ಎಕರೆ ಜಾಗದಲ್ಲಿ ೫೦೦ ಹಾಸಿಗೆಗಳ ಸರ್ಕಾರಿ ಜಿಲ್ಲಾ ಆಸ್ಪತ್ರೆ ಮಂಜೂರು ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ನಗರದಲ್ಲಿರುವ ಮೆಗ್ಗಾನ್ ಆಸ್ಪತ್ರೆಗೆ ಸುತ್ತಮುತ್ತಲಿನ ಶಿರಸಿ,ಸಿದ್ದಾಪುರ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಮೆಡಿಕಲ್ ಕಾಲೇಜಿಗೆ ಬರಬೇಕು. ಆದರೆ ಎಲ್ಲಾ ರೋಗಿಗಳು ನೇರವಾಗಿ ಇಲ್ಲಿಗೆ ಬರುತ್ತಿದ್ದಾರೆ. ಪ್ರತಿನಿತ್ಯ ೧೫೦೦ ಕ್ಕಿಂತ ಹೆಚ್ಚು ರೋಗಿಗಳನ್ನು ವೈದ್ಯರು ತಪಾಸಿಸಬೇಕಿದೆ ಎಂದರು.

ಇಲ್ಲಿ ಜಾಗ ಸಾಕಾಗುತ್ತಿಲ್ಲ. ಸಣ್ಣ ಪುಟ್ಟದ್ದಕ್ಕ್ಕೆಲ್ಲ ಮೆಗ್ಗಾನ್‌ಗೆ ಬರುವುದರಿಂದ ಜಿಲ್ಲಾ ಆಸ್ಪತ್ರೆ ಇದ್ದರೆ ಅಲ್ಲಿ ತೋರಿಸಿ ನಂತರ ಮೆಗ್ಗಾನ್ ಬೋಧನಾ ಆಸ್ಪತ್ರ್ರೆಗೆ ರೋಗಿಗಳು ಬರಬೇಕು. ಮೆಗ್ಗಾನ್ ಹತ್ತು ವರ್ಷಗಳ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ. ರೋಗಿಗಳು ಉಳಿಯಲು ಒಂದು ಶೆಲ್ಟರ್ ಇಲ್ಲ. ಸರಿಯಾದ ಶೌಚಾಲಯವಿಲ್ಲ. ಸ್ನಾನದ ಗೃಹಗಳಿಲ್ಲ. ಪ್ರತ್ಯೇಕ ಒ ಪಿ ಡಿ ವ್ಯವಸ್ಥೆ ಇಲ್ಲ. ಹೀಗಾದರೆ ರೋಗಿಗಳು ತುಂಬಾ ಸಮಸ್ಯೆಯನ್ನು ಎದುರಿಸಬೇಕಾಗಿದೆ.

ಈಗಾಗಲೇ ಶಿವಮೊಗ್ಗ ನಗರಕ್ಕೆ ಹೊಸದಾಗಿ ೫ ಖಾಸಗಿ ಆಸ್ಪತ್ರೆಗಳು ಬರುತ್ತಿವೆ. ಪೋರ್ಟಿಸ್ ಆಸ್ಪತ್ರೆಯೂ ಬರುತ್ತಿದೆ. ಈ ರೀತಿ ಖಾಸಗಿ ಆಸ್ಪತ್ರೆಗಳು ಜಾಸ್ತಿ ಆದರೆ ಬಡವರು ಹಣವನ್ನು ಎಲ್ಲಿಂದ ತಂದುಕೊಡಬೇಕು ಎನ್ನುವ ಪ್ರಶ್ನೆ ಮೂಡುತ್ತದೆ ಎಂದಿದ್ದಾರೆ.

ಆದ್ದರಿಂದ ಸರ್ಕಾರ ಇದನ್ನು ಪರಿಶೀಲಿಸಿ ಶಿವಮೊಗ್ಗ ನಗರಕ್ಕೆ ಹತ್ತು ಎಕರ ಜಾಗದಲ್ಲಿ ೫೦೦ ಹಾಸಿಗೆಗಳ ಸರ್ಕಾರಿ ಜಿಲ್ಲಾ ಆಸ್ಪತ್ರೆ ಮಂಜೂರು ಮಾಡಬೇಕೆಂದು ಅವರು ಆಗ್ರಹಿಸಿದರು.

Author