‘ರಾಜ್ಯಪಾಲ ಹಠಾವೋ ; ಕರ್ನಾಟಕ ಬಚಾವೋ’ ; ಶಿವಮೊಗ್ಗದಲ್ಲಿ ಯುವ ಕಾಂಗ್ರೆಸ್ ಆಕ್ರೋಶ

ಶಿವಮೊಗ್ಗ

ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಸಂವಿಧಾನಕ್ಕೆ ಅಪಮಾನ ಎಸಗಿದ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರನ್ನು ಕೂಡಲೇ ವಾಪಾಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ, ಶಿವಮೊಗ್ಗ ನಗರ ಯುವ ಕಾಂಗ್ರೆಸ್ ವತಿಯಿಂದ ‘ರಾಜ್ಯಪಾಲ ಹಠಾವೋ – ಕರ್ನಾಟಕ ಬಚಾವೋ’ ಆಂದೋಲನ ಹಮ್ಮಿಕೊಳ್ಳಲಾಯಿತು.ಭಾರತದ ಸಂವಿಧಾನದ ಪ್ರಕಾರ ಯಾವುದೇ ರಾಜ್ಯದ ವಿಧಾನಮಂಡಲ ಅಧಿವೇಶನದಲ್ಲಿ, ರಾಜ್ಯ ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಓದುವುದು ಸಂವಿಧಾನಾತ್ಮಕ ಕರ್ತವ್ಯವಾಗಿದೆ. ಆದರೆ ನಿನ್ನೆ ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್ ಗೆಹೋಟ್ ಅವರು ಸಲ್ಲದ ಹಾಗೂ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ತಮ್ಮ ಭಾಷಣವನ್ನು ಏಕಪಕ್ಷೀಯವಾಗಿ ಮೊಟಕುಗೊಳಿಸುವ ಮೂಲಕ ಸಂವಿಧಾನಕ್ಕೆ ಬಹಿರಂಗ ಅಪಮಾನ ಎಸಗಿದ್ದಾರೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ.

ರಾಜ್ಯಪಾಲರು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕೇ ಹೊರತು, ಕೇಂದ್ರ ಸರ್ಕಾರದ ಆಜ್ಞಾಪಾಲಕರಾಗಿ ಅಲ್ಲ. ರಾಜ್ಯಪಾಲರು ನಡೆದುಕೊಂಡ ರೀತಿ ಅವರು ಸಂವಿಧಾನಕ್ಕಿಂತ ಕೇಂದ್ರ ಸರ್ಕಾರದ ಇಚ್ಛೆಗೆ ಮಣೆ ಹಾಕಿರುವಂತೆ ಕಂಡುಬಂದಿದ್ದು, ಇದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವರ್ಷದ ಮೊದಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ಸಂವಿಧಾನಾತ್ಮಕ ಸಂಪ್ರದಾಯ. ಈ ಭಾಷಣದಲ್ಲಿ ಕೆಲವು ಸಾಲುಗಳು ಆಕ್ಷೇಪಾರ್ಹವಾಗಿವೆ ಎಂಬ ನೆಪವಿಟ್ಟು, ಆಡಳಿತಾರೂಢ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಸ್ವತಃ ರಾಜ್ಯಪಾಲರೇ ಮಾಡಿರುವುದು ಇದೇ ಮೊದಲ ಬಾರಿ. ಇಂತಹ ನಡೆ ಸಂವಿಧಾನದ ಆತ್ಮಕ್ಕೆ ಮಾರಕವಾಗಿದೆ ಎಂದು ಯುವ ಕಾಂಗ್ರೆಸ್ ಮುಖಂಡರು ಹೇಳಿದರು.

ರಾಜ್ಯಪಾಲರು ಸದನದ ಗಾಂಭೀರ್ಯವನ್ನು ಕಾಪಾಡಬೇಕಾದ ಹೊಣೆಗಾರಿಕೆಯನ್ನು ಹೊಂದಿದ್ದಾರೆ. ಆದರೆ ಅವರ ಅಸಂವಿಧಾನಿಕ ನಡೆ ಸದನದಲ್ಲಿ ಗದ್ದಲ ಮತ್ತು ಅಸ್ಥಿರತೆಗೆ ಕಾರಣವಾಗಿದೆ. ಇಂತಹ ರಾಜ್ಯಪಾಲರು ಕರ್ನಾಟಕಕ್ಕೆ ಅಗತ್ಯವಿಲ್ಲ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಕೂಡಲೇ ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹೋಟ್ ಅವರನ್ನು ವಾಪಾಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ, ಮಹಾನಗರ ಪಾಲಿಕೆ ಸಮೀಪದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಘೋಷಣೆಗಳೊಂದಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳದಿದ್ದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

ಈ ಪ್ರತಿಭಟನೆಯಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ಜಿಲ್ಲಾ ಯುವ ಕಾಂಗ್ರೆಸ್ ನಾಯಕರು ಎಚ್.ಸಿ. ಯೋಗೇಶ್, ಶಿವಕುಮಾರ್, ಮಹಮ್ಮದ್ ಗೌಸ್, ಗಿರೀಶ್, ಪ್ರವೀಣ್ ಕುಮಾರ್, ಚರಣ್ ಜೆ. ಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Author