ಕಾರವಾರ,ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪ್ರತಿಷ್ಠಿತ ಪಿಕಳೆ ನರ್ಸಿಂಗ್ ಹೋಂನ ಹಿರಿಯ ಸಿಬ್ಬಂದಿಯೊಬ್ಬರು ಅಂಕೋಲಾ ತಾಲೂಕಿನ ಅವರ್ಸಾದಲ್ಲಿರುವ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಕಾರವಾರ ನಗರಸಭೆಯ ಮಾಜಿ ಅಧ್ಯಕ್ಷ ಡಾ. ನಿತಿನ್ ಪಿಕಳೆ ಅವರ ಸಂಬಂಧಿ ರಾಜು ಪಿಕಳೆ ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ
ರಾಜು ಪಿಕಳೆ ಅವರು ಕಾರವಾರದ ಪಿಕಳೆ ನರ್ಸಿಂಗ್ ಹೋಂನ ಔಷಧಿ ವಿತರಣಾ ವಿಭಾಗದಲ್ಲಿ ಹಲವು ವರ್ಷಗಳಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. ಆದರೆ, ಸುಮಾರು 15 ದಿನಗಳ ಹಿಂದೆ ಅಪರಿಚಿತ ರೋಗಿಯ ಸಂಬಂಧಿಯೊಬ್ಬರು ರಾಜು ಪಿಕಳೆ ಅವರು ಅವಧಿ ಮೀರಿದ ಮಾತ್ರೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ, ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆದ ನಂತರ ರಾಜು ಪಿಕಳೆ ಅವರು ತೀವ್ರವಾಗಿ ನೊಂದಿದ್ದರು. ಇದು ಕೇವಲ ಕಣ್ತಪ್ಪಿನಿಂದ ಆದ ಪ್ರಮಾದ ಎಂದು ಅವರು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದರು ಎನ್ನಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಟೀಕೆಗಳು ಮತ್ತು ತೇಜೋವಧೆಯಿಂದ, ಕಳೆದ ಎರಡು ವಾರಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ.
ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಅಂಗಳದ ತುಳಸಿಕಟ್ಟೆಯ ಮುಂಭಾಗವೇ ರಾಜು ಪಿಕಳೆ ಅವರು ಡಬಲ್ ಬ್ಯಾರಲ್ ಗನ್ನಿಂದ ಶೂಟ್ ಮಾಡಿಕೊಂಡು ಬದುಕನ್ನು ಕೊನೆಗೊಳಿಸಿಕೊಂಡಿದ್ದಾರೆ.
ಗುಂಡಿನ ಸದ್ದು ಕೇಳಿ ಅಕ್ಕಪಕ್ಕದವರು ಧಾವಿಸಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾದರು.



