ಶಿವಮೊಗ್ಗ,ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮತ್ತು ಮಹಿಳಾ ಸಬಲೀಕರಣವಾಗಿದೆ ಜೊತೆಗೆ ಬಡವರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ನುಡಿದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕುರಿತಾದ ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ರೈತರ ಹಿಂದುಳಿದವರ, ಬಡವರ ಮತ್ತು ಮಹಿಳೆಯರ ಪರವಾಗಿದ್ದು, ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಬಳಿ ದುಡ್ಡು ಬಂದು ಖರ್ಚು ಸಹ ಹೆಚ್ಚಾಗಿದೆ. ಇದರಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಆದಾಯ ಬರುತ್ತದೆ. ಶಕ್ತಿ ಮತ್ತು ಗೃಹಲಕ್ಷ್ಮೀ ಯೋಜನೆಗಳಿಂದ ಮಹಿಳೆಯರು ಸ್ವಾವಲಂಬಿಗಳಾಗಿ, ಖರ್ಚು ಮಾಡಿದ್ದಾರೆ. ಇದರಿಂದ ದೇವಸ್ಥಾನದ ಆದಾಯ ಕೂಡ ಹೆಚ್ಚಿದೆ. ಗೃಹಜ್ಯೋತಿಯಿಂದ ಓದುವ ಮಕ್ಕಳಿಗೆ ಬಹಳ ಅನುಕೂಲವಾಗಿದೆ. ರಾಜ್ಯದ ಆರ್ಥಿಕ ವ್ಯವಸ್ಥೆ ಸರಿಪಡಿಸಲು ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು ಗ್ಯಾರಂಟಿ ಪ್ರಾಧಿಕಾರ ಕ್ಯಾಬಿನೆಟ್‌ಗಿಂತ ಉತ್ತಮ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಕೂಲಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರ ಉಪಯುಕ್ತವಾಗಿದೆ ಎಂದರು.
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎಂ ರೇವಣ್ಣ ಮಾತನಾಡಿ, ಎಲ್ಲ ಮುಖ್ಯಮಂತ್ರಿಗಳು ಜನರ ಉದ್ದಾರಕ್ಕಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ನೀಡಿದ್ದಾರೆ. ದೇವರಾಜ ಅರಸು, ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ ಸೇರಿದಂತೆ ಸಿದ್ದರಾಮಯ್ಯನವರು ರಾಜ್ಯದಲ್ಲಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಬಸವಣ್ಣನವರ ತತ್ವದ ಆಧಾರದಲ್ಲಿ ಅಧಿಕಾರ ನಡೆಸಿ ರೈತರಿಗೆ, ಜನರಿಗೆ, ವಿದ್ಯಾರ್ಥಿಗಳಿಗೆ ಅತ್ಯುತ್ತಮ ಯೋಜನೆಗಳನ್ನು ನೀಡಿದ್ದಾರೆ. ಸಿದ್ದರಾಮಯ್ಯನವರು ನೀಡಿದ್ದ ೧೬೫ ಭರವಸೆಗಳನ್ನು ಈಡೇರಿಸಿದ್ದಾರೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಡಾ.ವಾಸು ಹೆಚ್ ವಿ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ನಾವು ಸರ್ಕಾರದ ಯಾವುದೇ ಯೋಜನೆಗಳನ್ನು ವಿರೋಧ ಮಾಡಿಲ್ಲ. ಆದರೆ ಬಜೆಟ್‌ನಲ್ಲಿರುವ ಯೋಜನೆಗಳು ಜಾರಿಗೆ ಬರಬೇಕೆಂದು ಆಗ್ರಹಿಸಿದ್ದೆವು. ಯೋಜನೆಗಳು ಜನರಿಗೆ ಪೂರಕವಾಗಿರಬೇಕು ಎಂದ ಅವರು ಈ ಕಾರ್ಯಾಗಾರ ಒಂದು ಅವಲೋಕನ ಕಾರ್ಯಕ್ರಮವಾಗಿದ್ದು ಯೋಜನೆಯಲ್ಲಿನ ಕೊರತೆಗಳ ಕಡೆಯೂ ಗಮನ ಹರಿಸಬೇಕು ಎಂದರು.
ರಾಜ್ಯ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ, ಕರ್ನಾಟಕ ರಾಜ್ಯ ಜವಳಿ ನಿಗಮದ ಅಧ್ಯಕ್ಷ ಚೇತನ್ ಕೆ, , ಎಂಎಡಿಬಿ ಅಧ್ಯಕ್ಷ ಆರ್ ಎಂ.ಮಂಜುನಾಥಗೌಡ, ಜಿ.ಪಂ. ಸಿಇಓ ಹೇಮಂತ್ ಎನ್, ಪುಷ್ಪಾ ಅಮರನಾಥ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸದಸ್ಯರು, ತಾಲ್ಲೂಕು ಅಧ್ಯಕ್ಷರು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.



