ಶಿವಮೊಗ್ಗ | ಗ್ರಾಮ ಪಂಚಾಯಿತಿಗಳಿಗೂ ರಾಜಕೀಯ ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಸಿ : ಮಾಜಿ ಎಂ ಎಲ್ ಸಿ ಆರ್. ಕೆ. ಸಿದ್ದರಾಮಣ್ಣ ಅಗ್ರಹ

ರಾಜಕೀಯ

ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳಿಗೂ ರಾಜಕೀಯ ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಸಲು ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತರಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆ‌ರ್.ಕೆ.ಸಿದ್ದರಾಮಣ್ಣ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಜಿಪಂ, ತಾಪಂ, ಗ್ರಾಮ ಪಂಚಾಯಿತಿಗಳಿಗೆ ಒಂದೆ ಬಾರಿಗೆ ಚುನಾವಣೆ ನಡೆಸಲು ಮುಂದಾಗಿರುವುದನ್ನು ಬಿಜೆಪಿ ಸ್ವಾಗತಿಸುತ್ತದೆ. ಈಗಾಗಲೆ ಕೇಂದ್ರ ಸರ್ಕಾರವು ಜನಗಣತಿ ನಂತರ ಒಂದು ದೇಶ, ಒಂದು ಚುನಾವಣೆ ನಡೆಸಲು ತೀರ್ಮಾನಿಸಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ರಾಜಕೀಯ ಪಕ್ಷಗಳ ಆಧಾರದಲ್ಲಿ ನಡೆಯುತ್ತದೆ.

ಆದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇರುವುದಿಲ್ಲ. ಗ್ರಾಪಂನಲ್ಲೂ ಅಧಿಕೃತ ರಾಜಕೀಯ ಚುನಾವಣೆ ಚಿಹ್ನೆ ಆಧಾರದಲ್ಲಿ ನಡೆಯಬೇಕು ಎಂಬುದು ನಮ್ಮ ಆಗ್ರಹ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಸಚಿವ,ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ನೀಡಿದ್ದೇವೆ ಎಂದರು.

ಮಂಡಲ ಪಂಚಾಯಿತಿ ಅಸ್ತಿತ್ವದಲ್ಲಿ ಇದ್ದಾಗ ಪಕ್ಷದ ಚಿಹ್ನೆಗಳ ಆಧಾರದಲ್ಲಿ ಚುನಾವಣೆ ನಡೆದಿದೆ. ಪಂಚಾಯತ್ ರಾಜ್ ಅಧಿನಿಯಮ 1993 ಜಾರಿಯಾದ ನಂತರ ಇದು ನಿಂತು ಹೋಯಿತು. ಗ್ರಾಪಂ ಸದಸ್ಯನೂ ಸಹ ರಾಜಕೀಯ ಪಕ್ಷಗಳ ಬಿ ಫಾರಂ ಆಧಾರದಲ್ಲಿ ಚುನಾವಣೆಗೆ ಸ್ಪರ್ಧಿಸಬೇಕು ಎಂದರು.

ಪಕ್ಷದ ಚೌಕಟ್ಟು ಇಲ್ಲದ ಕಾರಣ ಗ್ರಾಮ ಪಂಚಾಯಿತಿಯಲ್ಲಿ ಹಲವು ಸಮಸ್ಯೆಗಳು ಆಗುತ್ತವೆ. ಪಕ್ಷಕ್ಕೆ ಅವಕಾಶ ಸಿಕ್ಕರೆ ಗ್ರಾಪಂನಲ್ಲಿ ಶಿಸ್ತು ಇರುತ್ತದೆ. ಆದ್ದರಿಂದ ಪಂಚಾಯತ್ ಅಧಿನಿಯಮ 1993ರ ಸೆಕ್ಷನ್ 7/2 ಕ್ಕೆ ತಿದ್ದುಪಡಿ ತರಬೇಕು. ತಿದ್ದುಪಡಿಗೆ ಸಮಯದ ಕೊರತೆಯಾದರೆ, ಸುಗ್ರೀವಾಜ್ಞೆಯನ್ನಾದರೂ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಪ್ರಮುಖರಾದ ಅಶೋಕಪ್ಪ, ದೇವರಾಜ್ ಉಪಸ್ಥಿತರಿದ್ದರು.

Author