ಶಿವಮೊಗ್ಗ, ಪೆರೋಲ್ ರಜೆ ಮುಗಿಸಿ ಕಾರಾಗೃಹಕ್ಕೆ ಮರಳುತ್ತಿದ್ದ ಸಜಾ ಬಂದಿಯೊಬ್ಬ ಕೇಂದ್ರ ಕಾರಾಗೃಹದೊಳಗೆ ಮದ್ಯ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಕೈದಿ ಮೋಹನ್ ಕುಮಾರ ಎಂಬಾತ ಪೆರೋಲ್ ಮುಗಿಸಿ ಜೈಲಿಗೆ ವಾಪಸ್ಸಾಗುವಾಗ ಮುಖ್ಯದ್ವಾರದ ತಪಾಸಣೆ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ.
ಜೈಲಿನ ಮುಖ್ಯದ್ವಾರದ ಆಕ್ಸೆಸ್ ಕಂಟ್ರೋಲ್ನಲ್ಲಿ ಕರ್ತವ್ಯದಲ್ಲಿದ್ದ KSISF ಸಿಬ್ಬಂದಿ, ಕೈದಿ ಮೋಹನ್ ಕುಮಾರನನ್ನು ತಪಾಸಣೆ ನಡೆಸಿದರು. ಆತ ಮದ್ಯಪಾನ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ತಕ್ಷಣ ಆತನ ಬ್ಯಾಗ್ ಪರಿಶೀಲಿಸಿದಾಗ, 90 ಎಂಎಲ್ನ ಒಂದು ಮದ್ಯದ ಪೌಚ್ ಹಾಗೂ 200 ಎಂಎಲ್ನ ಜಿರಾ ಮಸಾಲಾ ಬಾಟಲಿಯನ್ನು ಪತ್ತೆಯಾಗಿದೆ.ಕೈದಿಯು ಕಾರಾಗೃಹದ ನಿಯಮ ಉಲ್ಲಂಘಿಸಿ ನಿಷೇಧಿತ ವಸ್ತು ಒಳಕ್ಕೆ ಸಾಗಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಅವರು ದೂರು ನೀಡಿದ್ದಾರೆ.
ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



