ಶಿವಮೊಗ್ಗ, ಗಾಜನೂರು ಗ್ರಾಮದ ಬೀದಿ ಬೀದಿಗಳಲ್ಲಿರುವ ಗೂಡಂಗಡಿಗಳಲ್ಲಿ ನಡೆಯುತ್ತಿರುವ ಅನಧಿಕೃತ ಮದ್ಯ ಮಾರಾಟ ನಿಲ್ಲಿಸುವುದರ ಜೊತೆಗೆ ಗ್ರಾಮದ ಮಧ್ಯಭಾಗದಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ನ್ನು ತೆರವುಗೊಳಿಸುವಂತೆ ಆಗ್ರಹಿಸಿ ಮಾದಾರ ಮಹಾಸಭಾದ ಜಿಲ್ಲಾ ಶಾಖೆ ವತಿಯಿಂದ ಸೋಮವಾರ ಅಬಕಾರಿ ಇಲಾಖೆ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಗಾಜನೂರು ಗ್ರಾಮದ ಮಧ್ಯಭಾಗದಲ್ಲಿ ದೇವಸ್ಥಾನ ಮತ್ತು ಶಾಲೆಗಳ ಹತ್ತಿರವೇ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲಾಗಿದೆ. ಇದು ಬೆಳಿಗ್ಗೆ ಬಾಗಿಲು ತೆರೆದರೆ ರಾತ್ರಿ ೧೧ ಗಂಟೆ ಮತ್ತು ೧೨ ಗಂಟೆ ವರೆಗೂ ತೆರೆದಿರುತ್ತದೆ. ಗ್ರಾಮದ ಕೆಲವು ವಿಶೇಷ ದಿನಗಳಲ್ಲಿ ರಾತ್ರಿ ೨ ಗಂಟೆವರೆಗೂ ಯಾವುದೇ ಎಗ್ಗಿಲ್ಲದೆ ತೆರೆದೇ ಇರುತ್ತದೆ. ಅನಧಿಕೃತಿವಾಗಿ ಗೂಡಂಗಡಿಗಳಿಗೆ ಸರಬರಾಜು ಮಾಡುತ್ತಾರೆ. ಅಧಿಕಾರಿಗಳಿಗೆ ದೂರು ನೀಡಿದರೆ ಧಮಕಿ ಹಾಕಿಸುತ್ತಿದ್ದಾರೆ.
ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರು ಮಹಿಳೆಯರ ಮೇಲೆ ತುಂಗಾನಗರ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆಂದು ಹೇಳಿದರು.ಮದ್ಯಪಾನ ಮಾಡಿ ಕೆಲವರು ಶಾಲೆಗಳಿಗೆ, ದೇವಸ್ಥಾನಗಳಿಗೆ ಹೋಗುವ ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ವರ್ತನೆ ಮಾಡುವ ಪ್ರಕರಣಗಳೂ ಸಹ ನಡೆದಿವೆ. ಬಾರ್ ಮುಂಭಾಗದಲ್ಲಿ ಅಪಘಾತವಾಗಿ ೨-೩ ಸಾವಾಗಿರುತ್ತದೆ. ಗಲಾಟೆ ದೊಂಬಿಗಳು ಸಹ ನಡೆದಿವೆ. ಈ ವಿಚಾರವಾಗಿ ಕಳೆದ ಜ. ೫ರಂದು ಗ್ರಾಮಸ್ಥರು ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ತಕ್ಷಣ ಕಾರ್ಯೋನ್ಮುಖರಾಗಿ ಗ್ರಾಮದ ಮಧ್ಯಭಾಗದಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ ಅನ್ನು ಗ್ರಾಮದ ಮಧ್ಯಭಾಗದಿಂದ ಸ್ಥಳಾಂತರಿಸಿ ಗ್ರಾಮದಲ್ಲಿ ಗೂಡಂಗಡಿಗಳ ಮನೆಗಳಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಗಾಜನೂರು ನಾಗರಾಜ ನೇತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಡಿಎಸ್ಸೆಸ್ ಜಿಲ್ಲಾ ಸಂಚಾಲಕ ಟಿ ಎಚ್ ಹಾಲೇಶಪ್ಪ, ಮಾದಾರ ಜಿಲ್ಲಾ ಸಮಿತಿಯ ಮುಖಂಡರಾದ ತೇಜಸ್, ಜಿಲ್ಲಾಧ್ಯಕ್ಷ ಶಿವಾಜಿ ಮೊದಲಾದವರಿದ್ದರು.



