ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಳಿ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ನಡೆದ ಅಪಘಾತದಲ್ಲಿ ಶಿವರಾಜಪುರದಲ್ಲಿ ಸಣ್ಣ ಅಂಗಡಿ ನಡೆಸುತ್ತಾ ಶಾಲಾ ಮಕ್ಕಳನ್ನು ಕರೆದೊಯ್ಯುವ ಕಾಯಕ ಮಾಡುತ್ತಿದ್ದ ರಮೇಶ್ ಎಂಬುವವರು ಮೃತಪಟ್ಟಿದ್ದಾರೆ.
ರಮೇಶ್ ಅವರು ಶಿವರಾಜಪುರದ ಆಗುಂಬೆ ರಸ್ತೆಯ ಬದಿಯಲ್ಲಿರುವ ತಮ್ಮ ಅಂಗಡಿಯ ಎದುರು ಮಾರುತಿ ವ್ಯಾನ್ ನಿಲ್ಲಿಸಿ, ಅದರಿಂದ ಸಾಮಗ್ರಿಗಳನ್ನು ಹೊರತೆಗೆಯುತ್ತಿದ್ದರು. ಕೆಲವೇ ಹೊತ್ತಿನಲ್ಲಿ ಅವರು ಶಿವಮೊಗ್ಗಕ್ಕೆ ಸಂಬಂಧಿಕರ ಮದುವೆ ಆಮಂತ್ರಣ ಪತ್ರಿಕೆ ಹಂಚಲು ತೆರಳಬೇಕಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು.
ಆಗುಂಬೆ ಕಡೆಯಿಂದ ಅತಿವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ಏಕಾಏಕಿ ರಾಂಗ್ ಸೈಡ್‌ಗೆ ನುಗ್ಗಿ ರಸ್ತೆ ಬದಿಯಲ್ಲಿದ್ದ ವ್ಯಾನ್ ಹಾಗೂ ರಮೇಶ್ ಅವರಿಗೆ ಬಲವಾಗಿ ಅಪ್ಪಳಿಸಿದೆ.
ಅತಿವೇಗದ ಕಾರಿನ ಹೊಡೆತಕ್ಕೆ ಸಿಲುಕಿದ ರಮೇಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



