ಶಿವಮೊಗ್ಗ, ನಗರದ ವಿವೇಕಾನಂದ ಬಡಾವಣೆಯ ನಿವಾಸಿಯೊಬ್ಬರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಕಳ್ಳರು ದೋಚಿದ್ದಾರೆ. ವಿಜಯಲಕ್ಷ್ಮಿ ಎಂಬುವರ ಮನೆಯ ಬೀಗ ಒಡೆದು ಒಳನುಗ್ಗಿದ ಖದೀಮರ ಗ್ಯಾಂಗ್, ಬರೋಬ್ಬರಿ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಲೂಟಿ ಮಾಡಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನೇ ಹೊಂಚು ಹಾಕಿದ್ದ ಕಳ್ಳರು ಕಳ್ಳತನ ಎಸಗಿದ್ದಾರೆ.
ವಿಜಯಲಕ್ಷ್ಮಿ ಅವರು ಇತ್ತೀಚೆಗಷ್ಟೇ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಇದೇ ದುಃಖದಲ್ಲಿದ್ದ ಅವರು ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಈ ಕೃತ್ಯವೆಸಗಿದ್ದಾರೆ. ಕೇವಲ ಮನೆಯನ್ನಷ್ಟೇ ಲೂಟಿ ಮಾಡದ ಕಳ್ಳರು, ಪಕ್ಕದ ಮನೆಯ ಬೈಕ್ ಅನ್ನು ಸಹ ಕದ್ದಿದ್ದಾರೆ.
ಬೈಕನ್ನು ಸ್ವಲ್ಪ ದೂರದವರೆಗೆ ತಳ್ಳಿಕೊಂಡು ಹೋಗಿ, ಬಳಿಕ ಸ್ಟಾರ್ಟ್ ಮಾಡಿಕೊಂಡು ಪರಾರಿಯಾಗಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.



