ಸಂತಾಪ ಸಂದೇಶ : ಭೀಮಣ್ಣ ಖಂಡ್ರೆ, ಸ್ವಾತಂತ್ರ್ಯ ಹೋರಾಟಗಾರ, ಏಕೀಕರಣದ ರೂವಾರಿ, ಆರು ಬಾರಿ-ನಾಲ್ಕು ಬಾರಿ ವಿಧಾನಸಭೆ, ಎರಡು ಬಾರಿ ವಿಧಾನ ಪರಿಷತ್- ಶಾಸಕರಾಗಿ, ಸಾರಿಗೆ ಸಚಿವರಾಗಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮುತ್ಸದ್ಧಿ. ಸಮುದಾಯಕ್ಕೆ ಅನ್ಯಾಯವಾದಾಗಲೆಲ್ಲ ದಿಟ್ಚತನದಿಂದ ದನಿಯೆತ್ತಿ ಸಮುದಾಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದ್ದ ಹೋರಾಟಗಾರ.
ಬಸವತತ್ವದ ಮೇಲೆ, ನಿತ್ಯ ಇಷ್ಟಲಿಂಗ ಪೂಜೆ, ಕಾಯಕ-ದಾಸೋಹಗಳ ಮೇಲೆ ಅಪಾರ ಒಲವುಳ್ಳ ಶರಣ. ಇವೆಲ್ಲಕ್ಕೂ ಕಿರೀಟಪ್ರಾಯವಾಗಿದ್ದ ಜೀವನೋತ್ಸಾಹ. ಅಂತೆಯೇ ಅವರು ನೂರಾ ಎರಡು ವರ್ಷಗಳ ತುಂಬು ಜೀವನ ನಡೆಸಿದ್ದು! ಇಂದು ಇಹಲೋಕದ ಯಾತ್ರೆ ಮುಗಿಸಿ ಚಿರಶಾಂತಿಗೆ ಸಂದಿದ್ದಾರೆ.
ಅವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ, ಆಪ್ತವಲಯಕ್ಕೆ, ಅಭಿಮಾನಿ ವೃಂದಕ್ಕೆ ಕರುಣಿಸಲೆಂದು, ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸುತ್ತೇವೆ.
ಅವರ ಹೋರಾಟ, ಮೌಲಿಕ ಜೀವನ ಎಂದೆಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವಂಥದ್ದು ಎಂದು ಶ್ರೀ ಮ. ನಿ. ಪ್ರ. ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು- ಬಸವಕೇಂದ್ರ, ಶಿವಮೊಗ್ಗ ಸಂತಾಪ ಸಂದೇಶ ಸೂಚಿಸಿದ್ದಾರೆ.



