ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ‌ ನಿಧನ

ಬೀದರ್

ಬೀದರ್, ಶತಾಯುಷಿ ಹಾಗೂ ಮಾಜಿ ಸಚಿವರಾದ ಭೀಮಣ್ಣ ಖಂಡ್ರೆ ಅವರು ಶುಕ್ರವಾರ ರಾತ್ರಿ ವಿಧಿವಶರಾಗಿದ್ದಾರೆ. ಅವರಿಗೆ 102 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ಉಸಿರಾಟದಲ್ಲಿ ತೀವ್ರ ತೊಂದರೆ ಕಂಡುಬಂದಿದ್ದರಿಂದ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ ಕೊನೆಯುಸಿರೆಳೆದರು.

ಭೀಮಣ್ಣ ಖಂಡ್ರೆ ಅವರು ನಿರಂತರವಾಗಿ ಆರು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದು, ಅನೇಕ ಜನಪರ ಕಾರ್ಯಗಳು ಕೈಗೊಳ್ಳುವ ಮೂಲಕ ಹೆಸರುವಾಸಿಯಾಗಿದ್ದರು. 1936ರಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ ಅವರು, ಇದರಡಿ ವಿವಿಧ ಶಾಲಾ-ಕಾಲೇಜು ತೆರೆದು ಗಡಿ ಜಿಲ್ಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲಾಗಿದೆ.

ಈ ಮೂಲಕ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ.ಕಬ್ಬು ಕಾರ್ಖಾನೆಗೆ ಸಾಗದಿರುವುದು, ಸೂಕ್ತ ಬೆಲೆ ಸಿಗದ ಸಂದರ್ಭದಲ್ಲಿ ಜಿಲ್ಲೆಯ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ, ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆಗೆ ಶಕ್ತಿ ತುಂಬಿ ರೈತರಿಗೆ ಅನುಕೂಲ ಮಾಡಿಕೊಡುವಲ್ಲಿ ಭೀಮಣ್ಣ ಖಂಡ್ರೆ ಅವರ ಪಾತ್ರ ಪ್ರಮುಖ.

ವಿಧಿವಶರಾದ ಡಾ. ಭೀಮಣ್ಣ ಖಂಡ್ರೆ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ತಂದೆ, ಸಂಸದ ಸಾಗರ ಖಂಡ್ರೆಯವರ ಅಜ್ಜ ಕೂಡ ಹೌದು. ಶತಾಯುಷಿಗಳ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸೇರಿದಂತೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ

Author