ಮಂಗಳೂರು | ದ್ವೇಷಭಾಷಣ ಮಸೂದೆ;ರಾಜ್ಯಪಾಲರು ವಾಪಸ್ ಕಳಿಸಿಲ್ಲ: ಸಿಎಂ

ದಕ್ಷಿಣ ಕನ್ನಡ

ಮಂಗಳೂರು, ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಇಂದು ಸಿಎಂ ಮಾತನಾಡಿದರು.

ಬಿಜೆಪಿ ಪಾದಯಾತ್ರೆ ಏಕೆ ಕೈಗೊಳ್ಳಬೇಕು?

ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈ ಹಿಂದೆ ಬಳ್ಳಾರಿಯಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿದಾಗ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ ಅವರು ಸವಾಲು ಹಾಕಿದ್ದರು. ಅದಕ್ಕಾಗಿ ನಾವು ಪಾದಯಾತ್ರೆ ಮಾಡಿದೆವು. ಈಗ ಬಿಜೆಪಿಯವರು ಏಕೆ ಪಾದಯಾತ್ರೆ ಮಾಡಬೇಕು? ಎಂದು ಪ್ರಶ್ನಿಸಿದರು.*

ಬ್ಯಾನರ್ ತೆಗೆದದ್ದು ಬಳ್ಳಾರಿ ಘಟನೆಗೆ ಪ್ರಚೋದನೆ

ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಬಗ್ಗೆ ಹಾಕಿದ್ದ ಬ್ಯಾನರನ್ನು ತೆಗೆಯಬೇಕಾದ ಅಗತ್ಯವೇನಿತ್ತು? ಅದನ್ನು ತೆಗೆದದ್ದೆ ಘಟನೆಗೆ ಪ್ರಚೋದನೆ ಆಯಿತು ಎಂದರು. ಜನಾರ್ದನ ರೆಡ್ಡಿ , ಶ್ರೀರಾಮುಲು ಅವರು ಸ್ಥಾನ ಕಳೆದುಕೊಂಡಿದ್ದರಿಂದ ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಕುರ್ಚಿ ಕಾಳಗವಿಲ್ಲ

ಮುಖ್ಯಮಂತ್ರಿ ಕುರ್ಚಿ ಬಗ್ಗೆ ಕಾಳಗವೇ ಇಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Author