ಶಿವಮೊಗ್ಗ, ಅಕ್ಕ ಪಡೆ ರಚನೆಯು ಮಹಿಳಾ ಸಬಲೀಕರಣದೆಡೆ ಬಹುದೊಡ್ಡ ಹೆಜ್ಜೆಯಾಗಿದೆ. ಮಹಿಳೆ ಸಬಲವಾಗಲು ಸರಿಯಾದ ಶಿಕ್ಷಣ ಅಗತ್ಯವಿದ್ದು, ಶಾಲಾ-ಕಾಲೇಜುಗಳಿಗೆ ಹೋಗಿ ಬರುವ ವೇಳೆ ಹಾಗೂ ಸಾಮಾಜಿಕ ಜೀವನದಲ್ಲಿ ಆಕೆಗೆ ಸುರಕ್ಷಿತ ವಾತಾವರಣ ಬೇಕು. ಇಂತಹ ವಾತಾವರಣವನ್ನು ಅಕ್ಕ ಪಡೆ ನಿರ್ಮಿಸಲು ಸಹಕಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ ಎಸ್ ಹೇಳಿದರು.
ನೂತನವಾಗಿ ರಚಿಸಲಾಗಿರುವ ‘ಅಕ್ಕ ಪಡೆ’ ಗೆ ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಪೋಕ್ಸೋ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ‘ಅಕ್ಕ’ ಸಹಕಾರಿಯಾಗಲಿದೆ. ಹೆಣ್ಣುಮಕ್ಕಳು ತಮಗಾದ ಅನ್ಯಾಯ, ಕಿರುಕುಳ, ದೌರ್ಜನ್ಯ ಕುರಿತು ಅಂಜಿಕೆ ಇಲ್ಲದೇ, ಧೈರ್ಯದಿಂದ ಹೇಳಬೇಕು.
ಸಹಾಯವಾಣಿ ಸಂಖ್ಯೆ 112 ಮತ್ತು 1098 ಗೆ ಕರೆ ಮಾಡಿ ತಿಳಿಸಬಹುದು. ಹೀಗೆ ಕರೆ ಮಾಡಿದವರ ಮಾಹಿತಿ, ಕರೆ ಮಾಡಿದ ವಿಷಯಗಳನ್ನೆಲ್ಲ ಗೌಪ್ಯವಾಗಿ ಇಡಲಾಗುವುದು. ಆದ್ದರಿಂದ ತೊಂದರೆಗಳನ್ನು ನಿರ್ಭೀತಿಯಿಂದ ಹೇಳಿಕೊಳ್ಳಿರಿ. ಹಾಗೂ ನಿರ್ಭಯವಾಗಿ ಅಕ್ಕ ಪಡೆ ಸೌಲಭ್ಯವನ್ನು ಬಳಸಿಕೊಳ್ಳಿರಿ ಎಂದರು.
ಎಸ್ಪಿ. ಬಿ ನಿಖಿಲ್ ಮಾತನಾಡಿ, ಸಮಾಜಘಾತುಕ ಶಕ್ತಿಗಳು ಮಹಿಳೆಯರು ಮತ್ತು ಮಕ್ಳಳಿಗೆ ಕಿರುಕುಳ ನೀಡುವುದು, ಅಸಭ್ಯವಾಗಿ ವರ್ತಿಸುವುದು ಮತ್ತು ಯಾವುದೇ ರೀತಿಯ ದೌರ್ಜನ್ಯ ಎಸಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ‘ಅಕ್ಕ’ ಪಡೆ ರಚಿಸಲಾಗಿದೆ. ಅಪಾಯದಲ್ಲಿರುವ ಮತ್ತು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು, ಅಕ್ಕ ಪಡೆಯ ಪ್ರಾಥಮಿಕ ಉದ್ದೇಶವಾಗಿದೆ. ಇಡೀ ರಾಜ್ಯದಲ್ಲಿ ಬೇರೆ ಬೇರೆ ಹೆಸರಲ್ಲಿ ಈ ಪಡೆ ಕೆಲಸ ಮಾಡುತ್ತಿದೆ. ವಿಶೇಷವಾಗಿ ಶಾಲಾ ಕಾಲೇಜು ಹೆಣ್ಣುಮಕ್ಕಳು, ಮಹಿಳೆಯರ ರಕ್ಷಣೆಗಾಗಿ ಹಾಗೂ ಅವರಿಗೆ ಮಾನಸಿಕ ಧೈರ್ಯ ನೀಡಲು ಪಡೆ ರಚನೆಯಾಗಿದೆ ಎಂದರು.
ಪ್ರತಿ ದಿನ ಎರಡು ಪಾಳಿಗಳಲ್ಲಿ ಅಕ್ಕ ಪಡೆ ಕೆಲಸ ಮಾಡಲಿದೆ. ಈ ಪಡೆ ಕಾರ್ಯನಿರ್ವಹಣೆಗಾಗಿ ಹೊಸ ವಾಹನವನ್ನು ನೀಡಿದ್ದು, ಈ ವಾಹನವು ಪಡೆಯೊಂದಿಗೆ ಶಾಲಾ-ಕಾಲೇಜು, ಜನ ನಿಭಿಡ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಸಹಾಯವಾಣಿ ಸಂಖ್ಯೆಗಳಾದ 112 ಮತ್ತು 1098 ಕುರಿತು ಹಾಗೂ ಕಾನೂನುಗಳ ಬಗ್ಗೆಯೂ ಜಾಗೃತಿ ಮೂಡಿಸಲಿದೆ.
ಮಹಿಳಾ ಗೃಹರಕ್ಷಕಿಯರು ಹಾಗೂ ಮಹಿಳಾ ಅಧಿಕಾರಿಗಳನ್ನೇ ಈ ಪಡೆಗೆ ನೇಮಿಸಲಾಗಿದ್ದು, ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಮತ್ತು ಸ್ವತಂತ್ರವಾಗಿ ಮಾತನಾಡಿ, ಅಕ್ಕ ಪಡೆಯ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.



