ಶ್ರೀಮತಿ ವಿಶಾಲಾಕ್ಷಮ್ಮ ಅವರ ನಿಧನಕ್ಕೆ ಕಂಬನಿ ಮಿಡಿದ : ಆರ್ ಎಸ್ ಎಸ್ ಪ್ರಮುಖರು ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಜಿ

ಶಿವಮೊಗ್ಗ

ನಿನ್ನೆ ಒಂದು ಪುಟ್ಟ ಸಂದೇಶ ….. “ ಅಮ್ಮ ಇನ್ನಿಲ್ಲ ” . ಸಣ್ಣ ನೋವು ; ದುಃಖ ; ಕಣ್ಣಂಚಿನಲ್ಲಿ ಒಂದೆರಡು ಕಂಡೂ ಕಾಣದಂತೆ ಹನಿ ಕಂಬನಿ …..

ಅಮ್ಮ ಶ್ರೀಮತಿ ವಿಶಾಲಾಕ್ಷಮ್ಮ ತುಂಬಾ ಪ್ರಸಿದ್ದರಲ್ಲ ; ಕಾರ್ಯಕರ್ತರು ಎಂದು ಹೇಳುವ ಹಾಗಿಲ್ಲ ; ಪ್ರಕಲ್ಪ ನಡೆಸುತ್ತಿದ್ದರು ಎಂದೇನಿಲ್ಲ ; ಭಾಷಣ ಮಾಡಿದವರಲ್ಲ ; ಬೈಠಕ್ ತೆಗೆದುಕೊಂಡವರಲ್ಲ ; ಸಂಪರ್ಕಕ್ಕೆ ಹೋದವರಲ್ಲ ……

ಹಾಗಾದರೆ ಯಾರಿವರು …? ನಮಗೇಕೆ ದುಃಖ ??? ಅಮ್ಮ ಎಂದರೆ ಚಕ್ಕೊಡಬೈಲು ಶ್ರೀ ಬೆನಕ ಭಟ್ಟರ ಧರ್ಮಪತ್ನಿ . ಅಂಜನಕ್ಕ , ಮಾಧವ, ಆಶಕ್ಕ , ಅಂಬಿಕಾ ಅಕ್ಕ , ವತ್ಸ , ಶ್ಯಾಮ , ಪುಟ್ಟಿಯರ ತಾಯಿ . ಮೂವರು ಸೊಸೆಯರಿಗೆ ತಾಯಿ ರೂಪದ ಅತ್ತೆ . ಹಲವು ಮೊಮ್ಮಕ್ಕಳಿಗೆ ಅಜ್ಜಿ …… ಇಷ್ಟೇ ಆಗಿದ್ದರೆ ನೂರಾರು ಮಂದಿ ಇಂದು ದುಃಖಿಸುತ್ತಿರಲಿಲ್ಲ .

ಅವರು ಸಮಾಜದ ಕೆಲಸ ಮಾಡುತ್ತಿದ್ದ ಪ್ರಚಾರಕರಿಗೆ , ಸೇವಾ ವ್ರತಿಗಳಿಗೆ , ಪೂರ್ಣಾವಧಿ ಕಾರ್ಯಕರ್ತರಿಗೆ , ರಾಜಕೀಯ ಮುಖಂಡರಿಗೆ ತಾಯಿಯಾಗಿ ಸಲಹಿದವರು .

ಬೆನಕ ಭಟ್ಟರಿಗೆ ನೆರಳಾಗಿ , ಪೂರಕವಾಗಿ , ಒತ್ತಾಸೆಯಾಗಿ ನಿಂತವರು ಸದ್ದಿಲ್ಲದೆ … ಪ್ರಚಾರವಿಲ್ಲದೆ , ಹುದ್ದೆಯಿಲ್ಲದೆ . ಅವರ ತೂಕ ಗೊತ್ತಾಗಬೇಕಾದರೆ , ಆಳ ಗೊತ್ತಾಗಬೇಕಾದ್ರೆ ಒಂದೇ ಮಾತು ಸಾಕು …. 4 ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿಯಿದೆ , ಇಬ್ಬರು ಮಕ್ಕಳು ಹಲವು ವರ್ಷ ಸಾಮಾಜಿಕ ಕೆಲಸಕ್ಕೆ ಪೂರ್ಣ ಸಮಯ ಕೊಟ್ಟವರು , ಇಬ್ಬರು ಸೊಸೆಯರಿಗೆ ಸಂಘಟನೆ ಜವಾಬ್ದಾರಿಯಿದೆ .

ಇದು ಪೂರಕತೆ ಎಂದರೆ …. ಒತ್ತಾಸೆ ಎಂದರೆ …. ಅಮ್ಮ ಎಂದರೆ ಒಲೆ ಪಕ್ಕದಲ್ಲಿ ಕೂಡಿಸಿ ತಿಂಡಿ , ಊಟ …. ಎಲ್ಲ ಸಮಾಜದವರಿಗೆ ಸಮಾನ ಆಸ್ಥೆ, ಅಸೀಮ ಕಕ್ಕುಲಾತಿ , ತುಂಬಿದ ಜೀವನೋತ್ಸಾಹ …..

ರಾತ್ರಿ ಊಟದ ನಂತರ ಬೇಗ ಮಲಗಲು ಹೊರಟರೆ ಆರು ತಿಂಗಳ ನಂತರ ಬಂದಿದ್ದೀರಿ … ಸ್ವಲ್ಪ ಲೋಕದ ಸಮಾಚಾರ ಹೇಳಿ ಎಂದು ಮಧ್ಯರಾತ್ರಿಯವರೆಗೆ ಕುತೂಹಲದ ಪ್ರಶ್ನೆಯ ಜೊತೆಗೆ ಕೇಳುತ್ತಾ ಕೂರುವ ತವಕ – ಕುತೂಹಲ …..

ಹೀಗೆ ಅಮ್ಮ ಎಲ್ಲಾರಿಗೂ ಆಸರೆಯಾದವರು … ಮಡಿಲಾದವರು …. ನೆಮ್ಮದಿಯಾದವರು …. ಹೆಗಲಾದವರು … ನಿನ್ನೆಯಿಂದ ಅವರಿಲ್ಲ … ಅವರಿಲ್ಲದ ಆ ಬೀಡು ಬರಡಾಗದು…

ಏಕೆಂದರೆ ಬೆನಕ ಭಟ್ಟರು , ಅಮ್ಮ ಅಲ್ಲಿನ ಎಲ್ಲರನ್ನೂ ರೂಪದಲ್ಲಿ ಮಾತ್ರವಲ್ಲ ಬದಲಾಗಿ ಸ್ವಭಾವದಲ್ಲೂ ಪಡಿಯಚ್ಚಾಗಿಸಿದ್ದಾರೆ .

ಅಮ್ಮನ ನೆನಪಿಗೆ ಎರಡು ಹನಿ ಕಂಬನಿ , ಮಡುಗಟ್ಟಿದ ಹೃದಯ , ಶ್ರದ್ಧಾಂಜಲಿ…ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ ಸಲ್ಲಿಸಿದ ಆರ್ ಎಸ್ ಎಸ್ ಪ್ರಮುಖರು ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಜಿ

ಬರಹ : ಬಿ. ಎಲ್. ಸಂತೋಷ್ ಜಿ

Author