ಶಿವಮೊಗ್ಗ ತಾಲ್ಲೂಕು ಕೂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಪೋಷಕರ ಸಭೆ ನಡೆಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಬಿ.ಕೆ.ಕುಮಾರ್, ನಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ರೂಪಿಸುವಲ್ಲಿ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಶಿಕ್ಷಕರೊಂದಿಗೆ ಪಾಲಕ ಪೋಷಕರಾದ ನಾವೂ ಕೈಜೋಡಿಸಿದಾಗ ಮಕ್ಕಳ ಕಲಿಕೆಯ ಗುಣಮಟ್ಟ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯ ಬಿ.ಆರ್.ವಾಗೀಶ್ ಮಾತನಾಡಿ, ಇಂದು ಪೋಷಕರ ಸಭೆಯ ಜೊತೆಗೆ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಸಾವಿತ್ರಿಬಾಯಿ ಫುಲೆ ಅವರಂತೆ ಮಹಿಳೆಯರೆಲ್ಲರೂ ತಮ್ಮ ನೆರೆಹೊರೆಯ ಅನಕ್ಷರಸ್ಥರು ಹಾಗೂ ವಿದ್ಯಾರ್ಥಿಗಳಿಗೆ ತಾವು ಕಲಿತ ವಿದ್ಯೆಯನ್ನು ಧಾರೆ ಎರೆಯಬೇಕು ಎಂದು ಸಲಹೆ ನೀಡಿದರು.
ಗ್ರಾಮದ ಮುಖಂಡ ಮೈಲಾರಪ್ಪ ಮಾತನಾಡಿ, ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಹೊಳೆಹೊನ್ನೂರು ಹೈಸ್ಕೂಲ್ ಮತ್ತು ಕಾಲೇಜುಗಳಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಕಾರಣವಾದ ಶಾಲಾ ಶಿಕ್ಷಕರನ್ನು ಅಭಿನಂದಿಸುತ್ತೇನೆ ಎಂದರು.ಮುಖ್ಯ ಶಿಕ್ಷಕ ರಮೇಶ್ ಪಿ.ಕೆ ಮಾತನಾಡಿ, ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಹೆಚ್ಚಿನ ವ್ಯಾಸಂಗ ಮಾಡಿದ ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಶಾಲೆಗೆ ಬಂದು ಮಕ್ಕಳ ಕಲಿಕೆಗೆ ನೆರವಾಗುವಂತೆ ಮನವಿ ಮಾಡಿದರು. ಸಭೆಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್.ಹರೀಶ್ ಅಧ್ಯಕ್ಷತೆ ವಹಿಸಿದ್ದರು.
ಸದಸ್ಯರಾದ ಸಿದ್ದಪ್ಪ, ಪ್ರಭಾಕರ್, ಮಂಜಪ್ಪ ಜಗದೀಶಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಅಡುಗೆ ಸಿಬ್ಬಂದಿ ನೇತ್ರಾವತಿ ಕವಿತಾ, ಶಿಲ್ಪ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದ್ದರು.
ಶಾಲಾ ವಿದ್ಯಾರ್ಥಿನಿಯರಾದ ಹೇಮಾವತಿ, ಯಶಸ್ವಿನಿ ಮತ್ತು ಬಿಂದು ಪ್ರಾರ್ಥನೆ ನೆರವೇರಿಸಿದರು. ಶಿಕ್ಷಕಿ ವನಿತಾ ಸ್ವಾಗತಿಸಿದರು. ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿ, ದೀಪಾ ವಂದಿಸಿದರು.



