ಶಿವಮೊಗ್ಗ | ಶಾಸಕರ ವಿರುದ್ಧ ಡಿಎಸ್ಸೆಸ್ ತಮಟೆ ಚಳವಳಿಯ ಪ್ರತಿಭಟನೆ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಶಿರುಪತಿ ಗ್ರಾಮದಲ್ಲಿ ದಲಿತರಿಗೆ ಸರ್ಕಾರದಿಂದ ಮಂಜೂರಾದ ಜಮೀನಿನ ಸಾಗುವಳಿಗೆ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕವು ಭೂ ಮಾಪನ ಕಚೇರಿಯ ಮುಂಭಾಗ ಹಠಾತ್ ತಮಟೆ ಚಳವಳಿ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಕೀಗಡಿ ಕೃಷ್ಣಮೂರ್ತಿ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ದಲಿತರು ಇಂದಿಗೂ ಭಯದ ನೆರಳಿನಲ್ಲಿ ಬದುಕುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಶಾಸಕ ಆರಗ ಜ್ಞಾನೇಂದ್ರ ಅವರು ರಾಜಕೀಯ ಪ್ರಭಾವಕ್ಕೆ ಮಣಿದು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಗಂಭೀರವಾಗಿ ದೂರಿದರು.

ಶಿರುಪತಿ ಗ್ರಾಮದ ಸರ್ವೆ ನಂಬರ್ 11ರಲ್ಲಿ ಒಟ್ಟು 10 ದಲಿತ ಕುಟುಂಬಗಳಿಗೆ ಸರ್ಕಾರವು 18 ಎಕರೆ 10 ಗುಂಟೆ ಹೆಚ್ಚುವರಿ ಜಮೀನನ್ನು ಮಂಜೂರು ಮಾಡಿದ್ದರೂ ಸಹ, ಕಳೆದ 43 ವರ್ಷಗಳಿಂದ ಬಲಾಡ್ಯರು ಅಲ್ಲಿ ಕೃಷಿ ಚಟುವಟಿಕೆ ನಡೆಸಲು ಬಿಡುತ್ತಿಲ್ಲ ಎಂಬುದು ಪ್ರತಿಭಟನಾಕಾರರ ಪ್ರಮುಖ ಆಕ್ರೋಶವಾಗಿತ್ತು.

ಜಮೀನಿನ ದಾಖಲೆಗಳನ್ನು ಪಕ್ಕಾ ಪೋಡಿ ಮಾಡಲು ಭೂ ಮಾಪನಾ ಇಲಾಖೆಯು ನೋಟಿಸ್ ಜಾರಿ ಮಾಡಿದ್ದರೂ, ಶಾಸಕರ ಸೂಚನೆಯ ಮೇರೆಗೆ ಸರ್ವೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಆರೋಪಿಸಿದರು.

ನ್ಯಾಯಕ್ಕಾಗಿ ಹೋರಾಟ ಮಾಡುವವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸುವ ಹುನ್ನಾರ ನಡೆಯುತ್ತಿದೆ ಎಂದು ಮುಖಂಡ ಹರಡವಳ್ಳಿ ಮಂಜುನಾಥ್ ಕಿಡಿಕಾರಿದರು. ದಲಿತರ ಶೋಷಣೆಯನ್ನು ಸಹಿಸದೆ ಸಂವಿಧಾನದ ಚೌಕಟ್ಟಿನಲ್ಲೇ ಪ್ರಜಾಪ್ರಭುತ್ವ ಮಾದರಿಯ ಹೋರಾಟವನ್ನು ಮುಂದುವರಿಸುವುದಾಗಿ ಎಚ್ಚರಿಸಿದ ಸಂಘಟನೆಯ ಮುಖಂಡರು, ಕೂಡಲೇ ಸರ್ವೆ ಕಾರ್ಯ ಪೂರ್ಣಗೊಳಿಸಿ ದಲಿತರಿಗೆ ಜಮೀನು ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆಯ ಶಿರಸ್ತೇದಾರ್ ಸತ್ಯಮೂರ್ತಿ ಅವರು, ಮುಂದಿನ 15 ದಿನಗಳ ಒಳಗೆ ಪೊಲೀಸ್ ಇಲಾಖೆ ಹಾಗೂ ಭೂ ಮಾಪನಾ ಇಲಾಖೆಯ ಸಹಯೋಗದೊಂದಿಗೆ ದಿನಾಂಕ ನಿಗದಿಪಡಿಸಿ ಸರ್ವೆ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಭರವಸೆಯ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

Author