ಶಿವಮೊಗ್ಗ | ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಹಾಗೂ ವಿಎಚ್ ಪಿ ವತಿಯಿಂದ ಪ್ರತಿಭಟನೆ

ಶಿವಮೊಗ್ಗ

ಶಿವಮೊಗ್ಗ, ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದು ಸಮುದಾಯದ ಮೇಲೆ ನಡೆದಿರುವ ಬರ್ಬರ ಹತ್ಯೆಗಳು ಹಾಗೂ ಅಮಾನುಷ ದೌರ್ಜನ್ಯಗಳನ್ನು ಖಂಡಿಸಿ, ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತರಲು ಹೊರಟಿರುವ ದ್ವೇಷ ಭಾಷಣ ವಿಧೇಯಕವನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಇಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಅಂದೋಲನ ನಡೆಸಲಾಯಿತು.

ಈ ಅಂದೋಲನದಲ್ಲಿ ವಿವಿಧ ಹಿಂದೂ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಧರ್ಮಾಭಿಮಾನಿಗಳು ಭಾಗವಹಿಸಿದ್ದರು. ಬಾಂಗ್ಲಾದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂದುಗಳ ಹತ್ಯೆ, ದೇವಾಲಯಗಳ ಧ್ವಂಸ ಹಾಗೂ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸಿ, ಭಾರತ ಸರ್ಕಾರವು ಅಗತ್ಯ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇನ್ನೂ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ದ್ವೇಷ ಭಾಷಣ ವಿಧೇಯಕವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದು, ವಿಶೇಷವಾಗಿ ಹಿಂದೂ ಸಮಾಜದ ಧಾರ್ಮಿಕ ಆಚರಣೆಗಳು, ಧರ್ಮಪ್ರಚಾರ ಹಾಗೂ ಸತ್ಯವಚನಕ್ಕೆ ಅಡ್ಡಿಯಾಗುವಂತಹದ್ದಾಗಿದೆ. ಆದ್ದರಿಂದ ಈ ವಿಧೇಯಕವನ್ನು ತಕ್ಷಣವೇ ಹಿಂಪಡೆಯಬೇಕೆಂದು ಅಂದೋಲನಕಾರರು ಆಗ್ರಹಿಸಿದರು.

ಪ್ರತಿಭಟನೆಯ ಅಂತ್ಯದಲ್ಲಿ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸಲ್ಲಿಸಲಾಯಿತು.

Author