5 ರೂಪಾಯಿಗೆ ದಿನಕ್ಕೆ ಎರಡು ಬಾರಿ ಊಟ ; 45 ಅಟಲ್ ಕ್ಯಾಂಟೀನ್‌ಗಳನ್ನು ಉದ್ಘಾಟಿಸಿದ ಸಿಎಂ ರೇಖಾ ಗುಪ್ತಾ

ನವ ದೆಹಲಿ

ನವದೆಹಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 101ನೇ ಜನ್ಮದಿನಾಚರಣೆ (ಜನ್ಮ ಶತಾಬಿ) ಸಂದರ್ಭದಲ್ಲಿ ದೆಹಲಿ ಸರ್ಕಾರ 45 ‘ಅಟಲ್ ಕ್ಯಾಂಟೀನ್’ಗಳಿಗೆ ಚಾಲನೆ ನೀಡಿದೆ. ಈ ಕ್ಯಾಂಟೀನ್‌ಗಳಲ್ಲಿ ನಿತ್ಯ ₹5ಕ್ಕೆ ಪೌಷ್ಟಿಕ ಆಹಾರ ದೊರೆಯಲಿದೆ ಎಂದು ಸರ್ಕಾರ ಹೇಳಿದೆ.

ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಕೇಂದ್ರ ಇಂಧನ ಮತ್ತು ವಸತಿ ಸಚಿವ ಮನೋಹರ್ ಲಾಲ್ ಖಟ್ಟ‌ರ್ ಅವರು ನೆಹರೂ ನಗರದ ‘ಅಪ್ಪಾ ಬಜಾರ್’ ಬಳಿ ‘ಅಟಲ್ ಕ್ಯಾಂಟೀನ್’ಗೆ ಚಾಲನೆ ನೀಡಿದರು. ಇದೇ ವೇಳೆ ವರ್ಚುವಲ್‌ ಆಗಿ 44 ಕ್ಯಾಂಟೀನ್‌ಗಳನ್ನು ಉದ್ಘಾಟಿಸಲಾಯಿತು.

ಒಟ್ಟು 100 ಅಟಲ್ ಕ್ಯಾಂಟೀನ್‌ಗಳ ಪ್ರಾರಂಭಿಸುವ ಯೋಜನೆಯ ಸರ್ಕಾರ ಹೊಂದಿದೆ. ಅದರ ಭಾಗವಾಗಿ ಶುಕ್ರವಾರ 45 ಕ್ಯಾಂಟೀನ್‌ಗಳಿಗೆ ಚಾಲನೆ ನೀಡಲಾಗಿದೆ. ಉಳಿದ 55 ಕ್ಯಾಂಟೀನ್‌ಗಳು ಮುಂದಿನ 15ರಿಂದ 20 ದಿನಗಳಲ್ಲಿ ಆರಂಭವಾಗಲಿವೆ ಎಂದು ಸಿಎಂ ರೇಖಾ ಗುಪ್ತಾ ಮಾಹಿತಿ ನೀಡಿದರು.

ಪ್ರತಿ ಕ್ಯಾಂಟೀನ್‌ಗೆ ನಿತ್ಯ ಸುಮಾರು 1,000 ಊಟಗಳನ್ನು ವಿತರಿಸಲಾಗುವುದು. ಈ ಯೋಜನೆಯಿಂದ ನಿತ್ಯ 1 ಲಕ್ಷ ಜನರಿಗೆ ಅನುಕೂಲವಾಗಲಿದೆ. ರಾಜಧಾನಿಯಲ್ಲಿ ಕೂಲಿ ಕೆಲಸಗಾರರು, ಕಾರ್ಮಿಕರು, ಬಡವರಿಗೆ ಪೌಷ್ಟಿಕ ಆಹಾರ ದೊರೆಯಲಿ ಎಂಬುದು ಯೋಜನೆಯ ಉದ್ದೇಶ. ಈ ಯೋಜನೆಗಾಗಿ ಸರ್ಕಾರ ₹104.24 ಕೋಟಿ ಮಂಜೂರು ಮಾಡಿದೆ ಎಂದು ವಿವರಿಸಿದರು.

ಪ್ರತಿನಿತ್ಯ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ರಾತ್ರಿ 6.30ರಿಂದ 9 ಗಂಟೆಯವರೆಗೆ ಊಟ ವಿತರಿಸಲಾಗುವುದು. ಒಂದು ಊಟಕ್ಕೆ ₹5 ನಿಗದಿಪಡಿಸಲಾಗಿದೆ. ಸರ್ಕಾರ ಪ್ರತಿ ಊಟಕ್ಕೆ ತಲಾ ₹25 ವ್ಯಯಿಸಲಿದೆ ಎಂದು ತಿಳಿಸಿದರು.

ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟ‌ರ್ ಮಾತನಾಡಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ವಾರ್ಷಿಕೋತ್ಸವದಂದು ದಿಲ್ಲಿಯಾದ್ಯಂತ ಪ್ರಾರಂಭಿಸಲಾದ ಅಟಲ್ ಕ್ಯಾಂಟೀನ್‌ಗಳು ಸೇವೆ, ಉತ್ತಮ ಆಡಳಿತ ಮತ್ತು ಮಾನವ ಸಂವೇದನೆಯ ಆದರ್ಶಗಳಿಂದ ಪ್ರೇರಿತವಾದ ಐತಿಹಾಸಿಕ ಉಪಕ್ರಮ ಪ್ರತಿನಿಧಿಸುತ್ತವೆ. ಈ ಯೋಜನೆ ಕೇವಲ ಕಲ್ಯಾಣ ಕಾರ್ಯಕ್ರಮವಲ್ಲ, ಬದಲಾಗಿ ಕೊನೆಯ ಹಂತದ ನಾಗರಿಕರಿಗೆ ಗೌರವಾನ್ವಿತ ಬೆಂಬಲ ನೀಡುವ ಬಲವಾದ ಬದ್ಧತೆಯಾಗಿದೆ ಎಂದು ಕೇಂದ್ರ ಸಚಿವ ಖಟ್ಟ‌ರ್ ಹೇಳಿದರು.

ಊಟದಲ್ಲಿನ ಮೆನುಗಳೇನು?, ಊಟವು ರೋಟಿ, ಅನ್ನ, ದಾಲ್ ಮತ್ತು ತರಕಾರಿ ಪಲ್ಯವನ್ನು ಒಳಗೊಂಡಿರುತ್ತದೆ. ಪ್ರತಿ ಕ್ಯಾಂಟೀನ್‌ಗಳು ಆಧುನಿಕ ಶೈಲಿಯ ಅಡುಗೆ ಮನೆ ಹೊಂದಿರುತ್ತವೆ.

Author