ಬೆಂಗಳೂರು, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ವತಿಯಿಂದ ಇಂದು ಗಾಂಧಿ ಭವನದಲ್ಲಿ, ಸರ್ಕಾರ ಕೆಪಿಎಸ್ ಮ್ಯಾಗ್ನೆಟಿಕ್ ಶಾಲೆ, ಜಾರಿಗೆ ತರುವುದನ್ನು ವಿರೋಧಿಸಿ ಒಂದು ರಾಜ್ಯಮಟ್ಟದ ಸಮಾವೇಶ ನಡೆಯಿತು. ಈ ಸಂದರ್ಭದಲ್ಲಿ ಶಿಕ್ಷಣ ಉಳಿಸಿ ಸಮಿತಿಯ ಉಪಾಧ್ಯಕ್ಷರಾದ ವಿ.ಎನ್. ರಾಜಶೇಖರ ರವರು ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸರ್ಕಾರವು ಅಮೇರಿಕಾದಲ್ಲಿ ವಿಫಲವಾದ ಹಾಗೂ ಜನರಿಗೆ ಹೊರೆಯಾದ ಮ್ಯಾಗ್ನೆಟ್ ಶಾಲೆಗಳ ನಕಲನ್ನು ನಮ್ಮ ರಾಜ್ಯದಲ್ಲಿ ಅನುಸರಿಸಲು ಮುಂದಾಗಿರುವುದು ನಾಚಿಕೆಗೇಡಿನ ವಿಷಯವೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಲಾಭದ ಉದ್ದೇಶವುಳ್ಳ ಎಡಿಬಿ ಬ್ಯಾಂಕಿನಿಂದ ಸುಮಾರು 2 ಸಾವಿರ ಕೋಟಿ ಸಾಲ ತೆಗೆದುಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಹಾಗಾಗಿಯೇ ಬಡವರು, ರೈತ ಕಾರ್ಮಿಕರು, ಅಂಚಿನಲ್ಲಿರುವ ಜನರ ಮಕ್ಕಳು ಶಿಕ್ಷಣ ಪಡೆಯುವ ಏಕೈಕ ಜೀವಾಳವಾಗಿರುವ ಸರ್ಕಾರಿ ಶಾಲೆಗಳನ್ನು ಬಲಿ ಕೊಡಲು ಶಿಕ್ಷಣ ಸಚಿವರು ಹಾಗೂ ರಾಜ್ಯ ಸರ್ಕಾರವು ತೀರ್ಮಾನಿಸಿದೆ ಎಂದು ಹೇಳಿದರು.
ಶಿಕ್ಷಣ ಸಚಿವರು ಕೇವಲ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡುತ್ತಿದ್ದಾರೆ ವಿನಃ ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಬಲಪಡಿಸುವ ಕಾರ್ಯಗಳನ್ನು ಮಾಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ವೇಳೆ ಸರ್ಕಾರಕ್ಕೆ ಹಾಗೂ ಸಚಿವರಿಗೆ ನಿಜವಾಗಿಯೂ ಕನ್ನಡ ಶಾಲೆಗಳ ಬಗ್ಗೆ, ಬಡವರು, ದಲಿತರು, ರೈತ-ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಶಿಕ್ಷಣ ಇಲಾಖೆಯಿಂದ ಕೆ.ಪಿ.ಎಸ್.-ಮ್ಯಾಗ್ನೆಟ್ ಶಾಲೆಗಳ ಬಗ್ಗೆ ಹೊರಡಿಸಿರುವ ಆದೇಶಗಳನ್ನು ಹಿಂಪಡೆಯಬೇಕು ಹಾಗೂ ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಲಿಖಿತ ಆದೇಶಗಳನ್ನು ಹೊರಡಿಸಬೇಕೆಂದು ಆಗ್ರಹಿಸಿದರು.

ಶಿಕ್ಷಣ ತಜ್ಞರಾಗಿರುವ ಪ್ರೊ. ನಿರಂಜನ ಆರಾಧ್ಯರವರು ಮಾತನಾಡುತ್ತಾ ಈ ಸರ್ಕಾರಕ್ಕೆ ನಾವು ಕೆಲವು ತಾತ್ವಿಕ-ಸೈದ್ದಾಂತಿಕ ಪ್ರಶ್ನೆಗಳನ್ನು ಕೇಳಲೇಬೇಕಾಗಿದೆ. ಅವರದೇ ಸರ್ಕಾರವು ಹಿಂದೆ ತಂದಂತಹ ಶಿಕ್ಷಣ ಹಕ್ಕು ಕಾಯ್ದೆಯ ಅಂಶಗಳನ್ನು ಗಾಳಿಗೆ ತೂರಿ, ಎನ್.ಇ.ಪಿ-2೦2೦ರ ನೀತಿಯ ಶಿಫಾರಸ್ಸಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮವನ್ನು ಯಾಕಾಗಿ ತೆಗೆದುಕೊಳ್ಳುತ್ತಿರುವುದು. ಶಿಕ್ಷಣ ಸಚಿವರು ಬೆಳಗಾವಿ ಅಧಿವೇಶನದಲ್ಲಿ ನೀಡಿರುವ ಹೇಳಿಕೆಯು ಸುಳ್ಳಿನಿಂದ ಕೂಡಿದೆ. ಒಂದೆಡೆ ನಾವು ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳುತ್ತಾರೆ. ಇನ್ನೊಂದೆಡೆ ಸರ್ಕಾರಿ ಆದೇಶಗಳನ್ನು ಹೊರಡಿಸುತ್ತಾ ಕೆ.ಪಿ.ಎಸ್.-ಮ್ಯಾಗ್ನೆಟ್ ಶಾಲೆಗಳ ಸುತ್ತಮುತ್ತಲಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ದ್ವಂದ್ವ ನಿಲುವನ್ನು ಟೀಕಿಸಿದರು.
ದೇಶದಲ್ಲಿ 1೦ ವರ್ಷಗಳಲ್ಲಿ ಸುಮಾರು 3 ಲಕ್ಷ ಶಾಲೆಗಳನ್ನು ಹಾಗೂ ರಾಜ್ಯದಲ್ಲಿ ಸುಮಾರು 3 ಸಾವಿರ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಸರ್ಕಾರವು ಈ ಯೋಜನೆಯನ್ನು ಕೈಬಿಡದಿದ್ದರೆ ರಾಜ್ಯದ ಜನರು ಬುದ್ದಿ ಕಲಿಸುತ್ತಾರೆಂದು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಪ್ರೊ. ಎ.ಮುರಿಗೆಪ್ಪರವರು ಮಾತನಾಡುತ್ತಾ ಸರ್ಕಾರವು ಸಂವಿಧಾನವನ್ನು ಪಠಿಸುತ್ತಲೇ, ಸಂವಿಧಾನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುವುದು ಖಂಡನೀಯ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾರಕವಾಗಲಿರುವ ಕೆ.ಪಿ.ಎಸ್.-ಮ್ಯಾಗ್ನೆಟ್ ಶಾಲೆ ಯೋಜನೆಯನ್ನು ಕೈಬಿಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಶಿಕ್ಷಣ ತಜ್ಞರಾಗಿರುವ ಡಾ.ಎ.ಆರ್.ವಾಸವಿ ಯವರು ಮಾತನಾಡುತ್ತಾ ಸರ್ಕಾರವು ಕೆ.ಪಿ.ಎಸ್.-ಮ್ಯಾಗ್ನೆಟ್ ಶಾಲೆಗಳನ್ನು ತರುವ ಮುಂಚೆ ಯಾವುದೇ ರೀತಿಯ ಸಂಶೋಧನೆಯಾಗಲಿ, ಸಮೀಕ್ಷೆಯಾಗಲಿ ಮಾಡಿಲ್ಲ. ಮತ್ತು ಶಿಕ್ಷಣದ ಭಾಗಿದಾರರ ಜೊತೆಗೆ ಯಾವುದೇ ಚರ್ಚೆ, ಸಂವಾದಗಳನ್ನು ಮಾಡಿಲ್ಲ. ಇದು ಜನತಾಂತ್ರಿಕ ಪ್ರಕ್ರಿಯೆಗೆ ವಿರುದ್ದವಾದುದು ಎಂದು ಬೇಸರ ವ್ಯಕ್ತಪಡಿಸಿದರು. ಹಾಗಾಗಿ ಸರ್ಕಾರವು ಕೂಡಲೇ ಈ ನೀತಿಯನ್ನು ಕೈಬಿಡಬೇಕು ಹಾಗೂ ಪ್ರಸ್ತುತವಿರುವ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕೆಂದು ಒತ್ತಾಯಿಸಿದರು.
ತುಮಕೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಡಾ. ಎ.ಎಚ್.ರಾಜಾಸಾಬ್ ರವರು ಮಾತನಾಡುತ್ತಾ ಸರ್ಕಾರಿ ಶಾಲೆಗಳು ಪ್ರತಿ ಹಳ್ಳಿಯಲ್ಲಿ ಇರುವುದರಿಂದಲೇ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಲಿತವರು ಉತ್ತಮ ಸಾಹಿತಿಗಳಾಗಿದ್ದಾರೆ, ವಿಜ್ಞಾನಿಗಳಾಗಿದ್ದಾರೆ, ಉನ್ನತ ಹಂತದ ಹುದ್ದೆಗಳಲ್ಲಿಕಾರ್ಯನಿರ್ವಹಿಸುತ್ತಿದ್ದಾರೆ. ನಾಡಿನ ಬೌದ್ದಿಕ ಬೆಳವಣಿಗೆಯಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಮಹತ್ವದ್ದಾಗಿದೆ. ಹಾಗೂ ಊರಿನಲ್ಲಿಯೇ ಶಾಲೆ ಇರುವುದರಿಂದ ಬಡಮಕ್ಕಳು ಮತ್ತು ವಿಶೇಷವಾಗಿ ಹೆಣ್ಣುಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಒಂದು ವೇಳೆ ಕೆ.ಪಿ.ಎಸ್.-ಮ್ಯಾಗ್ನೆಟ್ ಶಾಲೆಗೆ ಊರಿನ ಶಾಲೆಯನ್ನು ವಿಲೀನಗೊಳಿಸಿದರೆ ಮುಂದೆ ಶಾಲೆಗಳಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ತೀವ್ರವಾಗಿ ಹೆಚ್ಚಾಗುತ್ತದೆ ಮತ್ತು ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ ರವರು ಮಾತನಾಡುತ್ತಾ ಸರ್ಕಾರದ ಈ ನೀತಿಯು ಸಮಾನತೆ-ಸಹಬಾಳ್ವೆಯ ಸಮಾಜಕ್ಕೆ ಕಂಟಕವಾಗಲಿದೆ. ನಮ್ಮನ್ನು ಆಳುತ್ತಿರುವ ಪ್ರಭುತ್ವವು ಹೇಗೆ ದಿನೇ ದಿನೇ ಕಾರ್ಪೋರೇಟ್ ಪರವಾಗಿ, ಸಾಮಾನ್ಯ ಜನತೆಗೆ ಮಾರಕವಾಗುವ ನೀತಿಗಳನ್ನು ತರುತ್ತಿವೆ ಎಂದು ತಿಳಿಸಿದರು.
ಈ ಕೆ.ಪಿ.ಎಸ್.-ಮ್ಯಾಗ್ನೆಟ್ ಶಾಲೆಗಳ ವಿರುದ್ದ ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸಲು ಬಲಿಷ್ಠ ಜನಾಂದೋಲನದ ಅಗತ್ಯವಿದೆ. ಅದಕ್ಕೆ ಮುನ್ನುಡಿಯಾಗಿ ಈ ಜನ ಸಮಾವೇಶ ನಡೆಯುತ್ತಿರುವುದು ಎಂದು ಹೇಳಿದರು.

ಈ ಹೋರಾಟವನ್ನು ವಿದ್ಯಾರ್ಥಿ-ಯುವಜನರು ಮುಂದಕ್ಕೆ ಒಯ್ಯಬೇಕೆಂದು ಕರೆ ನೀಡಿದರು. ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಅಧ್ಯಕ್ಷರಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು ರವರು ಮಾತನಾಡುತ್ತಾ ಈ ಸಮಾವೇಶವು ಸರ್ಕಾರಕ್ಕೆ ಒಂದು ಎಚ್ಚರಿಕೆಯ ಘಂಟೆಯಾಗಿದೆ.
ಸ್ವಾತಂತ್ರ‍್ಯ ಸಂಗ್ರಾಮದ ಹೋರಾಟಗಾರರು, ನವೋದಯ ಚಿಂತಕರ ಅವಿರತ ಪರಿಶ್ರಮದಿಂದಾಗಿ ಶಿಕ್ಷಣವು ಎಲ್ಲರಿಗೂ ಅಷ್ಟರಮಟ್ಟಿಗೆ ದೊರಕುತ್ತಿದೆ. ಸರ್ಕಾರವು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಬದಲಾಗಿ ಅವುಗಳ ಅಸ್ತಿತ್ವವನ್ನೇ ನಾಶ ಮಾಡುವ ಹುನ್ನಾರವು ಖಂಡನೀಯ. ಹಾಗಾಗಿ ಈ ಸಮಾವೇಶದ ಗೊತ್ತುವಳಿಯ ಮೂಲಕ ಸರ್ಕಾರಿ ಶಾಲೆಗಳನ್ನು ರಕ್ಷಿಸಬೇಕು ಹಾಗೂ ಖಾಯಂ ಶಿಕ್ಷಕರನ್ನು ನೇಮಿಸಬೇಕು ಹಾಗೂ ದ್ವಿಭಾಷಾ ಶಿಕ್ಷಣ ಕ್ರಮವನ್ನು ಕೂಡಲೇ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಈ ಜನ ಸಮಾವೇಶದಲ್ಲಿ ಗುಲಬರ್ಗಾ ವಿವಿಯ ನಿವೃತ್ತ ಪ್ರಾಧ್ಯಾಪಕರು, ಸಾಹಿಗಳಾದ ಪ್ರೊ. ಕಾಶಿನಾಥ ಅಂಬಲಗೆ, ಕನ್ನಡ ಪ್ರಾಧ್ಯಾಪಕರಾದ ಡಾ.ಕೆ.ನಾರಾಯಣಸ್ವಾಮಿ, ಬೆಂಗಳೂರು ನಗರ ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ. ಫ್ರಾನ್ಸಿಸ್ ಅಸ್ಸಿಸಿ ಅಲ್ಮೈಡಾ, ಕರ್ನಾಟಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಸಿ.ಆರ್.ಮೊಹಮ್ಮದ್ ಇಮ್ತಿಯಾಜ್, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ವಿದ್ಯಾರ್ಥಿ ನಾಯಕರಾದ ಸುಭಾಷ ಬೆಟ್ಟದಕೊಪ್ಪ, ಚನ್ನಪಟ್ಟಣದ ಸಂತೆ ಮೊಗೆನಹಳ್ಳಿ ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಶ್ರೀ ರಾಜು ಜೆ, ಮುಂತಾದವರು ಸರ್ಕಾರದ ಕೆ.ಪಿ.ಎಸ್-ಮ್ಯಾಗ್ನೆಟ್ ಶಾಲಾ ಯೋಜನೆಯ ವಿರುದ್ದ ಮಾತನಾಡಿದರು. ಸಮಾವೇಶದಲ್ಲಿ ಚಿಂತಕರಾದ ಶಿವಸುಂದರ, ಪ್ರೊ. ನಾಗರಾಜ, ಶಿಕ್ಷಣ ಉಳಿಸಿ ಸಮಿತಿ ಕಾರ್ಯದರ್ಶಿಗಳಾದ ಮಹೇಶ ಎಸ್. ಜಿ., ವಿವಿಧ ಜಿಲ್ಲೆಗಳ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.



