ಹರಿಯಾಣದ ರೋಹ್ಟಕ್ ನಲ್ಲಿ ಇಂಡಿಗೋ ವಿಮಾನ ರದ್ದಾದರಿಂದ ಮಗನ ಪರೀಕ್ಷೆಗಾಗಿ 800 ಕಿ.ಮೀ. ಕಾರು ಓಡಿಸಿಕೊಂಡು ಬಂದ ತಂದೆ ಘಟನೆ ನಡೆದಿದ್ದು.
ಕಳೆದ 10 ದಿನಗಳಿಂದ ಇಂಡಿಗೋದ ಗೋಳು ನಿಂತಿಲ್ಲ. ವಿಮಾನಗಳ ಹಾರಾಟ ರದ್ದಿನಿಂದ ಜನರು ಏನೇನೆಲ್ಲಾ ಸಮಸ್ಯೆ ಅನುಭವಿಸುವಂತಾಗಿದೆ. ಕೆಲವರು ಪರೀಕ್ಷೆ, ಮದುವೆ ಸಮಾರಂಭ, ಕಚೇರಿ ಕೆಲಸಗಳನ್ನು ತಪ್ಪಿಸಿಕೊಂಡಿದ್ದಾರೆ.
ಇಲ್ಲೊಂದು ಅಚ್ಚರಿಯ ಘಟನೆಯಲ್ಲಿ, ವಾಯುಯಾನ ಸಂಸ್ಥೆಯ ತಪ್ಪಿನಿಂದಾಗಿ 12ನೇ ತರಗತಿಯ ಹುಡುಗನೊಬ್ಬ ತನ್ನ ಕಾಲೇಜು ಪರೀಕ್ಷೆ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದ. ಆದರೆ, ಆತನ ತಂದೆ ಮಾಡಿದ ಸಾಹಸದಿಂದ ವಿದ್ಯಾರ್ಥಿ ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾನೆ. ಆದರೆ, ಈವರೆಗೂ ಆತನಿಗೆ ವಿಮಾನ ರದ್ದಾದ ಟಿಕೆಟ್ ಹಣ ಮಾತ್ರ ವಾಪಸ್ ಬಂದಿಲ್ಲ.
ಇಂಡಿಗೋ ವಿಮಾನಗಳ ರದ್ದಿನಿಂದ ಎಲ್ಲರಂತೆ ರೋಹ್ಟಕ್ ಜಿಲ್ಲೆಯ ಮೈನಾ ಗ್ರಾಮದ ವಿದ್ಯಾರ್ಥಿಯೊಬ್ಬ ತೊಂದರೆಗೆ ಸಿಲುಕಿದ್ದ. ಯುವ ಶೂಟರ್ ಆಗಿರುವ ಆಶಿಶ್ ಚೌಧರಿ ಪಂಘಲ್ ಎಂಬಾತ ಮಧ್ಯಪ್ರದೇಶದ ಇಂದೋರ್ನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಡಿಸೆಂಬರ್ 8ರಂದು ಕಾಲೇಜಿನ ಪ್ರೀ ಬೋರ್ಡ್ ಪರೀಕ್ಷೆಗಳು ನಿಗದಿಯಾಗಿದ್ದವು.ರಜೆಯ ಮೇಲೆ ತನ್ನೂರಿಗೆ ಆಗಮಿಸಿದ್ದ ಆಶಿಶ್ ಮರಳಿ ಇಂದೋರ್ಗೆ ತೆರಳಲು ದೆಹಲಿಯಿಂದ ಡಿಸೆಂಬರ್ 6ರಂದು ವಿಮಾನ ಬುಕ್ ಮಾಡಿದ್ದ.
ವಕೀಲರಾಗಿರುವ ಆತನ ತಂದೆ ಮಗನನ್ನು ಬಿಡಲು ದೆಹಲಿ ವಿಮಾನ ನಿಲ್ದಾಣಕ್ಕೆ ಹೋದರು. ನಿಲ್ದಾಣ ತಲುಪಿದ ನಂತರ, ಇಂದೋರ್ಗೆ ತೆರಳಬೇಕಿದ್ದ ಇಂಡಿಗೋ ವಿಮಾನ ರದ್ದಾಗಿದೆ ಎಂದು ಮಾಹಿತಿ ಸಿಕ್ಕಿತು. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಪರೀಕ್ಷೆ ತಪ್ಪಿಸಿಕೊಳ್ಳುವ ಆತಂಕ ಇತ್ತು.
800 ಕಿ.ಮೀ. ಕಾರು ಓಡಿಸಿ ಮಗನ ಕರೆತಂದ ತಂದೆ :
ಇಂಡಿಗೋ ವಿಮಾನ ರದ್ದಾಗಿದ್ದರಿಂದ ಮಗನ ಪರೀಕ್ಷೆಗಳು ತಪ್ಪಬಾರದು ಎಂದು ದೆಹಲಿಯಿಂದ ಇಂದೋರ್ಗೆ ಕಾರಿನಲ್ಲಿ ತೆರಳಲು ವಿದ್ಯಾರ್ಥಿಯ ತಂದೆ ನಿಶ್ಚಿಯಿಸಿದರು.
ದೆಹಲಿಯಿಂದ ಇಂದೋರ್ಗೆ ಸುಮಾರು 800 ಕಿಲೋಮೀಟರ್ ದೂರವಿದೆ. ಇಷ್ಟು ದೂರ ಕಾರನ್ನು ರಾತ್ರಿಯಿಡೀ ಒಬ್ಬರೇ ಚಲಾಯಿಸಿಕೊಂಡು ಬಂದಿದ್ದಾರೆ. ಮರುದಿನ ಸಮಯಕ್ಕೆ ಸರಿಯಾಗಿ ಇಂದೋರ್ ತಲುಪಿದ್ದಾರೆ. ಇದರಿಂದ ವಿದ್ಯಾರ್ಥಿ ಆಶಿಶ್ ಪರೀಕ್ಷೆ ಬರೆಯಲು ಸಾಧ್ಯವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿದ್ಯಾರ್ಥಿಯ ತಂದೆ, “ಇಂಡಿಗೋ ಬಿಕ್ಕಟ್ಟು ಎಲ್ಲ ಪ್ರಯಾಣಿಕರಂತೆ ನಮ್ಮನ್ನೂ ಬಾಧಿಸಿತು. ಡಿಸೆಂಬರ್ 6 ರಂದು ಸಂಜೆ 5:35 ಕ್ಕೆ ದೆಹಲಿಯಿಂದ ಇಂದೋರ್ಗೆ ವಿಮಾನ ಬುಕ್ ಮಾಡಿದ್ದೆ. ಆದರೆ, ನಾವು ನಿಲ್ದಾಣಕ್ಕೆ ಬಂದಾಗ, ವಿಮಾನ ರದ್ದಾಗಿದೆ ಎಂದು ತಿಳಿಯಿತು. ಏನು ಮಾಡಬೇಕೆಂದು ತಿಳಿಯದೆ ಗೊಂದಲದಲ್ಲಿದ್ದೆ. ಮಗನನ್ನು ರೈಲು ಅಥವಾ ಬಸ್ನಲ್ಲಿ ಕಳುಹಿಸಬಹುದೇ ಎಂದು ಯೋಚಿಸಿದೆ. ಆದರೆ, ಮರುದಿನದಿಂದ ಆತನ ಪರೀಕ್ಷೆಗಳು ಪ್ರಾರಂಭವಾಗಲಿದ್ದವು.
ಹೀಗಾಗಿ, ನಾನೇ ಆತನನ್ನು ಕಾರಿನಲ್ಲಿ ಇಂದೋರ್ಗೆ ಕರೆತರಲು ನಿರ್ಧರಿಸಿದೆ. ದಾರಿಯುದ್ದಕ್ಕೂ ನಾವು ತೊಂದರೆಗಳನ್ನು ಎದುರಿಸಿದೆವು.
ಆದರೂ, ರಾತ್ರಿಯಿಡೀ 800 ಕಿಲೋಮೀಟರ್ ಪ್ರಯಾಣವನ್ನು ಮುಂದುವರಿಸಿದೆವು. ಮರುದಿನ ಬೆಳಗ್ಗೆ 7 ಗಂಟೆಗೆ ಇಂದೋರ್ ತಲುಪಿದೆವು. ನನ್ನ ಮಗ ಪ್ರೀ ಬೋರ್ಡ್ ಪರೀಕ್ಷೆಗಳನ್ನು ಬರೆಯುತ್ತಿದ್ದಾನೆ” ಎಂದು ತಿಳಿಸಿದರು.”



