“ಸರ್ಕಾರಿ ಶಾಲೆಗಳನ್ನು ಮುಚ್ಚುವ ಆದೇಶ / ಸುತ್ತೋಲೆ ಗಳನ್ನು ಈ ಕೂಡಲೇ ಹಿಂಪಡೆಯಿರಿ ಹಾಗೂ ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂಬ ಸರ್ಕಾರಿ ಆದೇಶವನ್ನು ರಾಜ್ಯ ಸರ್ಕಾರ ತುರ್ತಾಗಿ ಹೊರಡಿಸಬೇಕು” ಎಂದು ಶ್ರೀ ಅಲ್ಲಮಪ್ರಭು ಬೆಟ್ಟದೂರು (ಶಿಕ್ಷಣ ತಜ್ಞರು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ, ( ಎ ಐ ಎಸ್ ಇ ಸಿ ) ಕರ್ನಾಟಕ ರಾಜ್ಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿನ್ನೆ ಬೆಳಗಾವಿ ಅಧಿವೇಶನದ ಸಧನದಲ್ಲಿ ಮಾತನಾಡುತ್ತಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ನವರು ‘ಒಂದು ಸರ್ಕಾರಿ ಶಾಲೆ ಶಾಲೆಯನ್ನೂ ಮುಚ್ಚುವುದಿಲ್ಲ, ಒಂದು ಮಗು ಇದ್ದರೂ ಶಾಲೆ ನಡೆಸುತ್ತೇವೆ,’ ಎಂದು ಘಂಠಾಗೋಷವಾಗಿ ಹೇಳಿದ್ದಾರೆ.
ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುವುದು ಎಂಬ ಅಪಾದನೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿರುವ ಅಸತ್ಯವೆಂದು ಸಹ ಹೇಳಿದ್ದಾರೆ.
ಆದರೆ, ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ದಿನಾಂಕ 15, ಅಕ್ಟೋಬರ್ 2025 ರಂದು ಹೊರಡಿಸಿರುವ ಸರ್ಕಾರಿ ಆದೇಶದ ಬಗ್ಗೆ ಸಚಿವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ?
ಈ ಸರ್ಕಾರಿ ಆದೇಶದಲ್ಲಿ ‘ಕೆಪಿಎಸ್ ಮ್ಯಾಗ್ನೆಟ್ ಶಾಲೆ’ ಗಳೊಂದಿಗೆ ಸುತ್ತಲಿನ ಕಡಿಮೆ ದಾಖಲಾತಿಯ ಶಾಲೆಗಳನ್ನು ವಿಲೀನಗೊಳಿಸಬೇಕು ಎಂದು ಆದೇಶಿಸಲಾಗಿದೆ. ಇದರೊಟ್ಟಿಗೆ, ಒಂದು ನಿರ್ದಿಷ್ಟ ‘ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ’ ಯಾವ ಯಾವ ಸರ್ಕಾರಿ ಶಾಲೆಗಳು ವಿಲೀನಾಗಬೇಕು (ಅಂದರೆ ಮುಚ್ಚಬೇಕು) ಎಂಬುದರ ಬಗ್ಗೆ ಒಂದಾದ ಮೇಲೆ ಒಂದು ಆದೇಶಗಳನ್ನು ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದ ಹಲವು ಶಾಲೆಗಳಿಗೆ ನೀಡಲಾಗಿದೆ.
ತಮ್ಮ ಖಾತೆಯ ಕೆಳಗಿರುವ ಶಿಕ್ಷಣ ಇಲಾಖೆಯ ಈ ಸರ್ಕಾರಿ ಆದೇಶಗಳ ಬಗ್ಗೆ ಸಚಿವರು ಏನು ಹೇಳುತ್ತಾರೆ? ಈ ಆದೇಶಗಳು ಹಾಗೂ ಸಚಿವ ಸಂಪುಟದ ನಿರ್ಧಾರಗಳು ಸಚಿವರಿಗೆ ತಿಳಿಯದೆಯೇ ತೆಗೆದುಕೊಳ್ಳಲಾಗಿದೆಯೇ? ರಾಜ್ಯದ ಜನತೆ ಯಾವುದನ್ನು ನಂಬಬೇಕು ಎಂದು ಪ್ರಶ್ನಿಸಿದ್ದಾರೆ? ಸಚಿವರು ಸದನದಲ್ಲಿ ಮಾಡಿದ ಭಾಷಣವನ್ನು ನಂಬಬೇಕೋ ಅಥವಾ ಶಿಕ್ಷಣ ಇಲಾಖೆಯ ಆದೇಶಗಳನ್ನು ನಂಬಬೇಕೋ?
ಆದ್ದರಿಂದ, ಕನ್ನಡ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂಬ ಸಚಿವರ ಒಳ್ಳೆಯ ಆಶಯಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದಲ್ಲಿ, “ಈ ಕೂಡಲೇ ರಾಜ್ಯ ಸರ್ಕಾರ ತನ್ನ 2025, ಅಕ್ಟೋಬರ್ 15ರ ಆದೇಶ ವನ್ನು ಹಿಂಪಡೆಯ ಬೇಕು. ಜನ ವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಎಪಿ 2020) ಯ ಅತ್ಯಂತ ವಿನಾಶಕಾರಿ ಶಿಫಾರಸ್ಸುಗಳಲ್ಲಿ ಒಂದಾಗಿರುವ ‘ಶಾಲಾ ವಿಲೀನದ’ ಹೆಸರಿನಲ್ಲಿ ಕಡಿಮೆ ದಾಖಲಾತಿಯ ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚಕೂಡದು ಎಂದು ಲಿಖಿತ ಆದೇಶ ವನ್ನು ರಾಜ್ಯ ಸರ್ಕಾರ ಹೊರಡಿಸಬೇಕು” ಎಂದು ಶಿಕ್ಷಣ ಉಳಿಸಿ ಸಮಿತಿ ಕರ್ನಾಟಕ ರಾಜ್ಯ ಸಮಿತಿಯ ಸೋಮಶೇಖರ್ ಗೌಡ ಜಿಲ್ಲಾ ಅಧ್ಯಕ್ಷರು ಆಗ್ರಹಿಸಿದ್ದಾರೆ.



