ನಟ ದರ್ಶನ್​ ಕೇಸ್​ನಲ್ಲಿ ಮತ್ತೊಂದು ಅಪ್​ಡೇಟ್

ಮನೋರಂಜನೆ

ನಟ ದರ್ಶನ್​ ಕೇಸ್​ನಲ್ಲಿ ಮತ್ತೊಂದು ಅಪ್​ಡೇಟ್ ಸುದ್ದಿ ಹೊರಬಿದ್ದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೃತರ ಪೋಷಕರಿಗೆ ಸಾಕ್ಷ್ಯ ನುಡಿಯಲು ಸಮನ್ಸ್‌ ಜಾರಿ ಮಾಡಲಾಗಿದೆ. ದರ್ಶನ್‌ ತೂಗುದೀಪ ಸೇರಿದಂತೆ ಹಲವರ ವಿರುದ್ಧ ದಾಖಲಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೃತರ ಪೋಷಕರಾದ ತಂದೆ ಕಾಶಿನಾಥಯ್ಯ ಮತ್ತು ತಾಯಿ ರತ್ನಮ್ಮ ಅವರಿಗೆ ಸಾಕ್ಷ್ಯ ನುಡಿಯಲು ಬೆಂಗಳೂರಿನ ಸತ್ರ ನ್ಯಾಯಾಲಯವು ಸಮನ್ಸ್‌ ಜಾರಿಗೊಳಿಸಿದೆ.

ಡಿಸೆಂಬರ್‌17 ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಸೂಚಿಸಿದೆ. ಪ್ರಕರಣದಲ್ಲಿ ಮೃತರ ತಂದೆ ಮತ್ತು ತಾಯಿ ಸಾಕ್ಷಿ ಸಂಖ್ಯೆ 7 ಮತ್ತು 8 ಸಮನ್ಸ್‌ ಜಾರಿಗೊಳಿಸಬೇಕು ಎಂದು ಕೋರಿ ಪ್ರಾಸಿಕ್ಯೂಷನ್‌ ಅರ್ಜಿ ಸಲ್ಲಿಸಿತ್ತು. ನ್ಯಾಯಾಧೀಶ ಐ.ಪಿ. ನಾಯಕ್ ಅವರು ಈ ಅರ್ಜಿಯನ್ನ ಪುರಸ್ಕರಿಸಿದ್ದಾರೆ.

ನವೆಂಬರ್‌ 3 ರಂದು ದರ್ಶನ್ ಸೇರಿದಂತೆ ಪ್ರಕರಣದ 17 ಆರೋಪಿಗಳ ವಿರುದ್ಧ ಕೊಲೆ, ಅಪಹರಣ, ಹಲ್ಲೆ, ಅಪರಾಧಿಕ ಒಳಸಂಚು, ಅಕ್ರಮ ಕೂಟ ರಚನೆ, ಹಣ ವಸೂಲಿ, ಅಕ್ರಮ ಬಂಧನ ಸೇರಿದಂತೆ ಇನ್ನಿತರ ಆರೋಪಗಳನ್ನ ಕೋರ್ಟ್​ನಲ್ಲಿ ಚಾರ್ಜ್​ ಮಾಡಲಾಗಿತ್ತು.

ನವೆಂಬರ್‌ 10 ರಿಂದ ಪ್ರಕರಣದ ಮುಖ್ಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಲಾಗಿತ್ತು. ಇದರ ಬೆನ್ನಲ್ಲೇ ನ್ಯಾಯಾಲಯ ಡಿಸೆಂಬರ್ 17 ರಂದು ಮೊದಲ ಸಾಕ್ಷಿಯನ್ನು ವಿಚಾರಣೆ ನಡೆಸಲಿದೆ.

Author