ನವದೆಹಲಿ, ಮಿಜೋರಾಂನ ಮಾಜಿ ರಾಜ್ಯಪಾಲ ಮತ್ತು ಬಿಜೆಪಿ ಹಿರಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಗುರುವಾರ ನಿಧನರಾದರು.
ಹಿರಿಯ ವಕೀಲರು ಹಾಗೂ ಸಂಸದೆ ಬಾನ್ಸೂರಿ ಸ್ವರಾಜ್ ಅವರ ತಂದೆಯಾಗಿದ್ದ ಕೌಶಲ್ ಅವರಿಗೆ 73 ವರ್ಷವಾಗಿತ್ತು.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ದೆಹಲಿ ಬಿಜೆಪಿ, “ಮಿಜೋರಾಂನ ಮಾಜಿ ರಾಜ್ಯಪಾಲರು ಹಾಗೂ ಹಿರಿಯ ವಕೀಲರಾಗಿದ್ದ ಸ್ವರಾಜ್ ಕೌಶಲ್ ಅವರ ಹಠಾತ್ ನಿಧನದ ಸುದ್ದಿ ತಿಳಿಸಲು ವಿಷಾದಿಸುತ್ತೇವೆ ಎಂದು ಹೇಳಿದೆ.
ಇಂದು ಮಧ್ಯಾಹ್ನ ಎದೆನೋವು ಕಾಣಿಸಿಕೊಂಡ ನಂತರ AIIMS ಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಲೋಧಿ ರಸ್ತೆಯ ಸ್ಮಶಾನದಲ್ಲಿ ಕೌಶಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಪಕ್ಷ ಹೇಳಿದೆ.



