ಇಸ್ಲಾಮಾಬಾದ್ ; ಹಲವು ರೀತಿಯ ಪ್ರತಿಷ್ಠೆ ಪ್ರದರ್ಶನ, ಭಿನ್ನಾಭಿಪ್ರಾಯಗಳ ನಡುವೆ ಅಮೆರಿಕ-ಇರಾನ್ ಶಾಂತಿ ಮಾತುಕತೆ ಶನಿವಾರ (ಏ.11) ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಪಾಕಿಸ್ತಾನದ ಪಾಲಿಗೆ ಇದು ಅತ್ಯಂತ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ.
ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗ ಮತ್ತು ಇರಾನ್ ಪರವಾಗಿ ಸಂಸದೀಯ ಸ್ಪೀಕರ್ ಮೊಹಮ್ಮದ್ ಬಘೇರ್ ಖಲಿಬಾಫ್ ನಿಯೋಗ ಶಾಂತಿ ಮಾತುಕತೆಯಲ್ಲಿ ಭಾಗವಹಿಸುತ್ತಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಮತ್ತು ಅಲ್ಲಿನ ವಿದೇಶಾಂಗ ಸಚಿವರು ಮಧ್ಯಸ್ಥಿಕೆ ವಹಿಸುತ್ತಿದ್ದಾರೆ.ಜೆ.ಡಿ ವ್ಯಾನ್ಸ್ ನಿಯೋಗದಲ್ಲಿ ಅಧ್ಯಕ್ಷ ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್, ಅಧ್ಯಕ್ಷ ಟ್ರಂಪ್ ಅವರ ಅಳಿಯ ಮತ್ತು ಸಲಹೆಗಾರ ಜೇರೆಡ್ ಕುಶ್ನರ್, ರಕ್ಷಣಾ ಇಲಾಖೆ ಅಥವಾ ನೌಕಾಪಡೆಯ ಉನ್ನತ ಅಧಿಕಾರಿ ಬ್ರಾಡ್ ಕೂಪರ್ ಮತ್ತು ಹೆಚ್ಚುವರಿಯಾಗಿ, ರಾಷ್ಟ್ರೀಯ ಭದ್ರತಾ ಮಂಡಳಿ (ಎನ್‌ಎಸ್‌ಸಿ) ಮತ್ತು ವಿದೇಶಾಂಗ ಇಲಾಖೆಯ ತಜ್ಞರು ಇರಲಿದ್ದಾರೆ.
ಮೊಹಮ್ಮದ್ ಬಘೇರ್ ಖಲಿಬಾಫ್ ನಿಯೋಗದಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಅಲಿ ಅಕ್ಬರ್ ಅಹ್ಮದಿಯಾನ್, ಇರಾನ್ ಕೇಂದ್ರೀಯ ಬ್ಯಾಂಕ್ ಗವರ್ನರ್ (ಆರ್ಥಿಕ ನಿರ್ಬಂಧಗಳ ಚರ್ಚೆಗಾಗಿ) ಅಬ್ದೋಲ್ನಾಸರ್ ಹೆಮ್ಮತಿ, ಹಿರಿಯ ರಾಜತಾಂತ್ರಿಕ ಮಜಿದ್ ತಖ್ತ್ ರಾವಂಚಿ ಮತ್ತು ಮಾಜಿ ಐಆರ್‌ಜಿಸಿ ಕಮಾಂಡರ್ ಮೊಹಮ್ಮದ್ ಬಘೇರ್ ಜೊಲ್ಘಾದರ್ ಇರಲಿದ್ದಾರೆ.
ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನದ ಪರವಾಗಿ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಜೊತೆ ವಿದೇಶಾಂಗ ಸಚಿವ ಇಶಾಕ್ ದಾರ್, ಸೇನಾ ಮುಖ್ಯಸ್ಥ (ಭದ್ರತೆ ಮತ್ತು ಕಾರ್ಯತಂತ್ರದ ಮಾತುಕತೆಗಾಗಿ) ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಸರ್ದಾರ್ ಅಯಾಝ್ ಸಾದಿಕ್ ಮತ್ತು ಆಂತರಿಕ ಸಚಿವ (ಭದ್ರತಾ ವ್ಯವಸ್ಥೆಗಳ ಉಸ್ತುವಾರಿ) ಮೊಹ್ಸಿನ್ ನಖ್ವಿ ಇರಲಿದ್ದಾರೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಸಂಘರ್ಷ ಪ್ರಾರಂಭಗೊಂಡಿತ್ತು.
ನಂತರ ಏಪ್ರಿಲ್ 7ರಂದು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಘೋಷಿಸಲಾದ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಪ್ರಸ್ತುತ ಜಾರಿಯಲ್ಲಿದೆ.


