ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನಕ್ಕೆ ಇನ್ನೆರಡು ದಿನ ಬಾಕಿ ಇರುವಂತೆ ಮಧ್ಯ ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ಚಿತ್ರದುರ್ಗದ ಸಿರಿಗೆರೆ ತರಳಬಾಳು ಮಠ ಮಹತ್ವದ ಸ್ಪಷ್ಟನೆ ನೀಡಿದೆ.
ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಪರವಾಗಿಲ್ಲ ಎಂದು ತಿಳಿಸಿದೆ.ಮಠವು ಮಂಗಳವಾರ ಪ್ರಕಟಣೆ ನೀಡಿದ್ದು, ಮಠವು ಹಿಂದಿನಂತೆ ಈ ಬಾರಿ ಕೂಡ ಸಂಪೂರ್ಣ ತಟಸ್ಥ ನಿಲುವು ಅನುಸರಿಸುತ್ತಿದೆ.
ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನಿರ್ದಿಷ್ಟ ರಾಜಕೀಯ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂಬ ತಪ್ಪು ಮಾಹಿತಿಯನ್ನು ಬಿಂಬಿಸಲಾಗಿದೆ.
ಶ್ರೀಗಳ ಹಾಗೂ ಅಭ್ಯರ್ಥಿಯ ಭಾವಚಿತ್ರಗಳೊಂದಿಗೆ ಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಮಾಹಿತಿ ಸಂಪೂರ್ಣ ಕಪೋಲಕಲ್ಪಿತವಾಗಿದ್ದು, ಇದನ್ನು ಮಠವು ಖಂಡಿಸಿದೆ. ತಪ್ಪು ಪ್ರಚಾರ ಹರಡಿಸುತ್ತಿರುವುದು ವಿಷಾದನೀಯ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ತಪ್ಪು ಪ್ರಚಾರ ಹರಡಿಸುತ್ತಿರುವುದು ವಿಷಾದನೀಯ ಎಂದು ತರಳಬಾಳು ಬೃಹನ್ಮಠದ ಕಾರ್ಯದರ್ಶಿ ತಿಳಿಸಿದ್ದಾರೆ.
ತಕ್ಷಣವೇ ಈ ರೀತಿಯ ಸುಳ್ಳು ಸುದ್ದಿಗಳನ್ನು ತೆಗೆದು ಹಾಕಬೇಕೆಂದು ಅವರು ಆಗ್ರಹಿಸಿದ್ದಾರೆ.
ಸೂಕ್ತ ಕ್ರಮಕ್ಕೆ ಪೊಲೀಸರಿಗೆ ದೂರು:
ಈಗಾಗಲೇ ದಾವಣಗೆರೆ ಚುನಾವಣಾಧಿಕಾರಿ ಹಾಗೂ ದಾವಣಗೆರೆ ಎಸ್ಪಿ ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಸುಳ್ಳು ಮಾಹಿತಿ ಹರಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ದೂರು ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


