ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರೊಂದಿಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕೃಷಿ ಸಂಬಂಧ ಮಹತ್ವದ ಚರ್ಚೆ ನಡೆಸಿದ ಸಚಿವ ಎನ್. ಚಲುವರಾಯಸ್ವಾಮಿ

ಬೆಂಗಳೂರು

ಬೆಂಗಳೂರು,ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಯವರು ಇಂದು ಬೆಂಗಳೂರಿನಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಬೆಂಬಲ ಬೆಲೆ ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಈ ಸಭೆಯಲ್ಲಿ ಕೆಳಕಂಡ ವಿಷಯಗಳು ಪ್ರಸ್ತಾಪಗೊಂಡವು:•

ಕುಸುಬೆ ಖರೀದಿ ಪ್ರಸ್ತಾವನೆ:ಕರ್ನಾಟಕ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕುಸುಬೆ ಉತ್ಪನ್ನವನ್ನು ಖರೀದಿಸಲು 07.03.2026ರಂದು ಸಲ್ಲಿಸಿದ ಪ್ರಸ್ತಾವನೆ ಕುರಿತು ವಿಸ್ತೃತ ಚರ್ಚೆ ನಡೆಯಿತು. ರಾಜ್ಯದ ಮಾರುಕಟ್ಟೆಗಳಲ್ಲಿ ಬೆಲೆ ಕುಸಿತ ಕಂಡುಬಂದಿರುವ ಹಿನ್ನೆಲೆಯಲ್ಲಿ, ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಅನುಮೋದನೆ ನೀಡುವಂತೆ ಮನವಿ ಮಾಡಲಾಯಿತು. ಇದಕ್ಕೆ ಕೇಂದ್ರ ಸಚಿವರು ಸಹಮತ ವ್ಯಕ್ತಪಡಿಸಿದರು.•

ತೊಗರಿ ಖರೀದಿ ಅವಧಿ ವಿಸ್ತರಣೆ:

31.03.2026ಕ್ಕೆ ಮುಕ್ತಾಯಗೊಳ್ಳಲಿರುವ ತೊಗರಿ ಖರೀದಿ ಅವಧಿಯನ್ನು 01.04.2026ರಿಂದ 15.05.2026ರವರೆಗೆ ವಿಸ್ತರಿಸಲು ಮನವಿ ಮಾಡಲಾಯಿತು. ಈ ಸಂಬಂಧ ರಾಜ್ಯ ಸರ್ಕಾರದಿಂದ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿಷಯವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದರು.•

ಬೆಲೆ ವ್ಯತ್ಯಾಸ ಪಾವತಿ ಬಿಡುಗಡೆ:ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿಯಲ್ಲಿ ಖರೀದಿಸಲಾದ ಮಾವು ಉತ್ಪನ್ನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ರೂ. 22.71 ಕೋಟಿ ಮೊತ್ತವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು.

ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ.

Author