ನವದೆಹಲಿ, ರೈಲು ನಿರ್ಗಮಿಸುವ 8 ಗಂಟೆ ಮೊದಲು ಟಿಕೆಟ್ ರದ್ದುಗೊಳಿಸಿದರೆ ಮಾತ್ರ ಹಣ ರಿಫಂಡ್ ಆಗುತ್ತದೆ. ರೈಲು ಹೊರಡಲು ಕೊನೆಯ 8 ಗಂಟೆಯ ನಂತರ ಟಿಕೆಟ್ ರದ್ದು ಮಾಡಿದರೆ ಯಾವುದೇ ರಿಫಂಡ್ ಇರುವುದಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರೈಲ್ವೆ ಇಲಾಖೆ ಹೊಸ ಮರುಪಾವತಿ ಸ್ಲ್ಯಾಬ್ಗಳನ್ನು ಪ್ರಕಟಿಸಿದ್ದು, ಈ ಹೊಸ ನಿಯಮ ಈ ವರ್ಷ ಏಪ್ರಿಲ್ 1 ಮತ್ತು 15ರ ನಡುವೆ ಜಾರಿಗೆ ಬರಲಿದೆ. ಪ್ರಸ್ತುತ ಈ ಸ್ಲ್ಯಾಬ್ 4 ಗಂಟೆಗೆ ಅಂದರೆ ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಿದರೆ ಮಾತ್ರ ರಿಫಂಡ್ ಅವಕಾಶ ಇತ್ತು.
ಇತರ ಮರುಪಾವತಿ ಸ್ಲ್ಯಾಬ್ಗಳ ಪರಿಷ್ಕರಣೆ: 24ರಿಂದ 8 ಗಂಟೆಗಳ ನಡುವೆ ರದ್ದುಗೊಳಿಸಿದರೆ, ಟಿಕೆಟ್ ವೆಚ್ಚದಿಂದ ಶೇ.50ರಷ್ಟು ಕಡಿತಗೊಳಿಸಲಾಗುತ್ತದೆ. ಇದು ಪ್ರಸ್ತುತ 12ರಿಂದ ನಾಲ್ಕು ಗಂಟೆಗಳಿಗಿದೆ.ಅದೇ ರೀತಿ, ನಿರ್ಗಮನಕ್ಕೆ 72ರಿಂದ 24 ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಿದರೆ ರೈಲ್ವೆ ಟಿಕೆಟ್ ವೆಚ್ಚದ ಶೇ.25ರಷ್ಟು ಕಡಿತಗೊಳಿಸಲಾಗುತ್ತದೆ.
ರೈಲು ಹೊರಡುವ 72 ಗಂಟೆಗಳಿಗಿಂತ ಮೊದಲು ಟಿಕೆಟ್ ಮಾಡಿದರೆ ಪ್ರತಿ ಪ್ರಯಾಣಿಕರಿಗೆ ಸ್ಥಿರ ರದ್ದತಿ ಶುಲ್ಕ ಹೊರತುಪಡಿಸಿ ಪೂರ್ಣ ಮರುಪಾವತಿಯನ್ನು ನೀಡಲಾಗುತ್ತದೆ.
ಅಸ್ತಿತ್ವದಲ್ಲಿರುವ ನೀತಿಯಡಿಯಲ್ಲಿ, 48 ರಿಂದ 12 ಗಂಟೆಗಳ ನಡುವೆ ಮಾಡಿದ ರದ್ದತಿಗೆ ಟಿಕೆಟ್ ವೆಚ್ಚದ ಶೇ.25ರಷ್ಟು ಕಡಿತಗೊಳಿಸಲಾಗುತ್ತದೆ. ಆದರೆ 48 ಗಂಟೆಗಳಿಗಿಂತ ಮುಂಚಿತವಾಗಿ ಮಾಡಿದ ರದ್ದತಿಗೆ ಪೂರ್ಣ ಮರುಪಾವತಿ ನೀಡಲಾಗುತ್ತಿದೆ.
ಕಾಳಸಂತೆಯಲ್ಲಿ ಹಾಗೂ ಏಜೆಂಟ್ಗಳಿಂದ ಕೊನೆಯ ಕ್ಷಣದ ಟಿಕೆಟ್ಗಳ ಮಾರಾಟವನ್ನು ತಡೆಯಲು ಮರುಪಾವತಿ ನಿಯಮವನ್ನು ಮಾರ್ಪಡಿಸಲಾಗುತ್ತಿದೆ ಎಂದು ವೈಷ್ಣವ್ ಹೇಳಿದರು.
ಹೊಸ ಮರುಪಾವತಿ ನಿಯಮವು ಈ ವರ್ಷದ ಜನವರಿಯ ನಂತರ ಪ್ರಾರಂಭಿಸಲಾದ ವಂದೇ ಭಾರತ್ ಸ್ಲೀಪರ್ ಮತ್ತು ಅಮೃತ್ ಭಾರತ್ II ರೈಲುಗಳಲ್ಲಿ ಈಗಾಗಲೇ ಜಾರಿಯಲ್ಲಿದೆ.
ರೈಲ್ವೆ ಪ್ರಯಾಣಿಕರ (ಟಿಕೆಟ್ ರದ್ದತಿ ಮತ್ತು ದರ ಮರುಪಾವತಿ) ನಿಯಮಗಳು, 2015 ಅನ್ನು ತಿದ್ದುಪಡಿ ಮಾಡಿದ ನಂತರ 2026ರ ಜನವರಿ 16ರಂದು ಹೊರಡಿಸಲಾದ ಅಧಿಸೂಚನೆಯ ಮೂಲಕ ಸಚಿವಾಲಯ ಇದನ್ನು ಮೊದಲು ಘೋಷಿಸಿತು ಎಂದು ಮಾಹಿತಿ ನೀಡಿದರು.
ಕೌಂಟರ್ನಲ್ಲಿ ಟಿಕೆಟ್ಗಳನ್ನು ಖರೀದಿಸಿದ ಪ್ರಯಾಣಿಕರಿಗೆ ನಿರ್ಗಮನಕ್ಕೆ 30 ನಿಮಿಷಗಳ ಮೊದಲು ಪ್ರಯಾಣ ವರ್ಗವನ್ನು ಅಪ್ಗ್ರೇಡ್ ಮಾಡಲು ಅನುಮತಿಸಲಾಗುವುದು ಎಂದು ವೈಷ್ಣವ್ ಹೇಳಿದರು.
ಇದಕ್ಕೂ ಮೊದಲು, ಪ್ರಯಾಣಿಕರು ರೈಲಿನ ಮೊದಲ ಚಾರ್ಟ್ಗೆ ಮೊದಲು ಮಾತ್ರ ಪ್ರಯಾಣ ವರ್ಗವನ್ನು ಅಪ್ಗ್ರೇಡ್ ಮಾಡಬಹುದಿತ್ತು.
“ಮೊದಲ ಚಾರ್ಟ್ ರೈಲು ಹೊರಡುವ ಕನಿಷ್ಠ ಎಂಟು ಗಂಟೆಗಳ ಮೊದಲು ಮತ್ತು ಎರಡನೇ ಚಾರ್ಟ್ 15 ರಿಂದ 30 ನಿಮಿಷಗಳ ನಡುವೆ ಬಿಡುಗಡೆ ಮಾಡಲಾಗುತ್ತದೆ. ಪ್ರಯಾಣಿಕರು ಈಗ ರೈಲು ಹೊರಡುವ 30 ನಿಮಿಷಗಳ ಮೊದಲು ತಮ್ಮ ಪ್ರಯಾಣ ವರ್ಗವನ್ನು ಅಪ್ಗ್ರೇಡ್ ಮಾಡಬಹುದು.
ಈ ಸೌಲಭ್ಯವು ಕೌಂಟರ್ ಟಿಕೆಟ್ ಹೊಂದಿರುವವರಿಗೆ ಮಾತ್ರ ಲಭ್ಯ. ಆನ್ಲೈನ್ ಟಿಕೆಟ್ ಖರೀದಿದಾರರಿಗೆ ವರ್ಗ ಅಪ್ಗ್ರೇಡ್ ಮಾಡಲು ಅವಕಾಶವಿಲ್ಲ” ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದರು.
ಪ್ರಯಾಣಿಕರಿಗೆ ರೈಲು ನಿಗದಿತ ನಿರ್ಗಮನಕ್ಕೆ 30 ನಿಮಿಷಗಳ ಮೊದಲು ತಮ್ಮ ಬೋರ್ಡಿಂಗ್ ಪಾಯಿಂಟ್ ಅನ್ನು ಬದಲಾಯಿಸುವ ಸ್ವಾತಂತ್ರ್ಯವನ್ನು ನೀಡಲಾಗುವುದು ಎಂದು ವೈಷ್ಣವ್ ತಿಳಿಸಿದರು.



