ತಂತ್ರಜ್ಞಾನದ ಸದ್ಬಳಕೆಯಾಗಬೇಕು,ಮಕ್ಕಳ ಉಜ್ವಲ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ; ಸಚಿವ ಮಧು ಬಂಗಾರಪ್ಪ

ಬೆಂಗಳೂರು

ಬೆಂಗಳೂರು,ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಪ್ರತಾಪ್‌ಸಿಂಹ ನಾಯಕ್ ಕೆ. ಹಾಗೂ ಟಿ.ಎನ್. ಜವರಾಯಿ ಗೌಡ ಅವರು ಶಾಲಾ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ತಡೆಯುವ ಕುರಿತು ಕೇಳಿದ ಅತ್ಯಂತ ಪ್ರಮುಖ ಪ್ರಶ್ನೆಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್. ಮಧು ಬಂಗಾರಪ್ಪನವರು ಪರಿಷತ್ತಿನಲ್ಲಿ ಉತ್ತರಿಸಿ,ಮಕ್ಕಳ ಭವಿಷ್ಯ ಮತ್ತು ಅವರ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ನಮ್ಮ ಸರ್ಕಾರ ಹಲವು ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ.

ಈ ಕುರಿತು ಸರ್ಕಾರ ಕೈಗೊಂಡ ಪ್ರಮುಖ ವಿಷಯ ಗಳನ್ನು ವಿಧಾನ ಪರಿಷತ್ತಿನಲ್ಲಿ ವಿವರಿಸಿದರು.16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧ: ದೇಶದಲ್ಲೇ ಮೊದಲ ಬಾರಿಗೆ, 16 ವರ್ಷದೊಳಗಿನ ಶಾಲಾ ಮಕ್ಕಳಿಗೆ ಮೊಬೈಲ್ ಬಳಕೆಯನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, 2026-27ನೇ ಸಾಲಿನ ಆಯವ್ಯಯದಲ್ಲಿ (ಬಜೆಟ್) ಇದನ್ನು ಈಗಾಗಲೇ ಘೋಷಿಸಲಾಗಿದೆ ಎಂದರು.

ನೈತಿಕ ಶಿಕ್ಷಣದ (Moral Science) ಮರುಪರಿಚಯ: ತಂತ್ರಜ್ಞಾನದ ಇಂದಿನ ಯುಗದಲ್ಲಿ, ಮೊಬೈಲ್‌ನಿಂದ ಕಲಿಯುವುದಕ್ಕಿಂತ ಅನಗತ್ಯ ವಿಚಾರಗಳೇ ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತಿವೆ.

ಇದು ಸಮಾಜ ಮತ್ತು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಶಾಲೆಗಳಲ್ಲಿ ‘ನೈತಿಕ ಶಿಕ್ಷಣ’ವನ್ನು ಉಚಿತವಾಗಿ ಪರಿಚಯಿಸಿ, ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವ ಕೆಲಸವನ್ನು ಆರಂಭಿಸಲಾಗುವುದು.

ತಜ್ಞರು ಮತ್ತು ಪೋಷಕರೊಂದಿಗೆ ಸಮಾಲೋಚನೆ:

ಕೇವಲ ಕಾನೂನು ತರುವುದಷ್ಟೇ ಅಲ್ಲ, ಐಟಿ ಇಲಾಖೆ, ಮಕ್ಕಳ ಹಕ್ಕುಗಳ ರಕ್ಷಣಾ ಸಂಸ್ಥೆಗಳು ಹಾಗೂ ಸೈಬರ್ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಮಾರ್ಗಸೂಚಿಗಳನ್ನು (Guidelines) ರೂಪಿಸಲಾಗುತ್ತಿದೆ. ಪೋಷಕರ ಸಹಕಾರ ಮತ್ತು ಸಂವಹನ ಈ ನಿಟ್ಟಿನಲ್ಲಿ ಅತ್ಯಂತ ಅವಶ್ಯಕವಾಗಿದೆ ಎಂದರು.

ದೇಶಕ್ಕೇ ಮಾದರಿ:

ನಮ್ಮ ರಾಜ್ಯದ ಸಂಸ್ಕೃತಿ ಮತ್ತು ಧರ್ಮಗಳ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲರ ಸಲಹೆ-ಸೂಚನೆಗಳನ್ನು ಪಡೆದು ಶೀಘ್ರದಲ್ಲೇ ಒಂದು ಕಟ್ಟುನಿಟ್ಟಾದ ನಿಯಮಾವಳಿಯನ್ನು ಜಾರಿಗೆ ತರಲಿದ್ದೇವೆ. ಈ ನಿರ್ಧಾರ ಇಡೀ ದೇಶಕ್ಕೆ ಒಂದು ಮಾದರಿಯಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದರು.

ತಂತ್ರಜ್ಞಾನದ ಸದ್ಬಳಕೆಯಾಗಬೇಕೇ ಹೊರತು, ಅದು ನಮ್ಮ ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳಬಾರದು. ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

Author