ಬೆಂಗಳೂರು | ಶಾಲಾ ಮಕ್ಕಳ ಶೂ, ಸಾಕ್ಸ್ ಖರೀದಿ ತೀರ್ಮಾನ ; SDMCಗಳಿಗೆ ಬಿಡಬೇಕು : ನಿರಂಜನಾರಾಧ್ಯ ವಿ.ಪಿ ಅಗ್ರಹ

ಬೆಂಗಳೂರು

ಬೆಂಗಳೂರು, ದಿನಾಂಕ 19.03.2026-27ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ನೀಡುವ ಉಚಿತ ಶೂ -ಸಾಕ್ಸ್ ಖರೀದಿಯ ಜವಾಬ್ದಾರಿಯನ್ನು ಎಸ್ ಡಿ ಎಂಸಿ ಗಳಿಂದ ಕಸಿದು ಟೆಂಡರ್ ಪ್ರಕ್ರಿಯೆ ಮೂಲಕ ತಾನೇ ಖರೀದಿಸಿ ನೀಡುವ ಸರ್ಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಬಲವಾಗಿ ಖಂಡಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದುವರೆದು ಈ ಕೆಳಗಿನ ಮಾಹಿತಿ ತಿಳಿಸಿರುತ್ತಾರೆ ಅದೇನಂದರೆ ಶಿಕ್ಷಣ ಹಕ್ಕು ಕಾಯಿದೆ ಸೆಕ್ಷನ್ 21ರ ಅನ್ವಯ, ಶಾಲೆಗಳ ಸಂಪೂರ್ಣ ಜವಾಬ್ದಾರಿ ಎಸ್ ಡಿ ಎಂ ಸಿ ಗಳದ್ದಾಗಿದ್ದು ಆಡಳಿತ, ಶೈಕ್ಷಣಿಕ ಮತ್ತು ಎಲ್ಲಾ ಬಗೆಯ ಉಚಿತ ಉತ್ತೇಜಕಗಳನ್ನು ಪಾರದರ್ಶಕವಾಗಿ ಮತ್ತು ಗುಣಮಟ್ಟದ ಖಾತರಿಯೊಂದಿಗೆ ಮಕ್ಕಳಿಗೆ ನೀಡುವ ಜವಾಬ್ದಾರಿಯನ್ನು ಈ ಹಿಂದೆ SDMC, ಗಳಿಗೆ ನೀಡಲಾಗಿತ್ತು .

ಇದು ಶೈಕ್ಷಣಿಕ ವಿಕೇಂದ್ರೀಕರಣ ವ್ಯವಸ್ಥೆಯನ್ನು ಗೌರವಿಸುವದರ ಜೊತೆಗೆ ಶಿಕ್ಷಣ ಹಕ್ಕು ಕಾಯಿದೆ ಮತ್ತು ಎಸ್ ಡಿ ಎಂ ಸಿ ಬೈಲಾದಲ್ಲಿ ವ್ಯಾಖ್ಯಾನಿಸಿದಂತೆ ಎಸ್ ಡಿ ಎಮ್ ಸಿ ಗಳು ಸ್ಥಳೀಯ ಸರ್ಕಾರದ ವಿಸ್ತ್ರುತ ಭಾಗವಾಗಿ ಕಾರ್ಯ ನಿರ್ವಹಿಸುವ ಕಾನೂನುದತ್ತ ಅಧಿಕಾರವಾಗಿದೆ .

ಶೈಕ್ಷಣಿಕ ವಿಕೇಂದ್ರೀಕರಣದ ಭಾಗವಾಗಿ ಎಸ್ ಡಿ ಎಂ ಸಿ ಗಳಿಗಿದ್ದ,ಈ ಜವಾಬ್ದಾರಿಯನ್ನು ಕಸಿದು ಮತ್ತೆ ಕೇಂದ್ರೀಕರಣಗೊಳಿಸುತ್ತಿರುವುದನ್ನು ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ವೇದಿಕೆ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯ ಈ ನಿರ್ಧಾರದ ಹಿಂದೆ ಇಲಾಖೆಯ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಕಮಿಷನ್ ಅಥವಾ ಲಂಚ ಪಡೆಯುವ ಹುನ್ನಾರವಿರುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ಆರೋಪಿಸಿದೆ. ಅಕ್ರಮವಾಗಿ ಹಣ ಗಳಿಸುವ ಲಾಭದಾಯಕ ಒಪ್ಪಂದಕ್ಕಾಗಿ ಇಲಾಖೆ ಈ ಕಾನೂನುಬಾಹಿರ ತೀರ್ಮಾನಕ್ಕೆ ಮುಂದಾಗಿದೆ ಎಂದು ವೇದಿಕೆ ಅಭಿಪ್ರಾಯ ಪಡುತ್ತದೆ ಎಂದಿದ್ದಾರೆ .

ಶಾಲಾ ಶಿಕ್ಷಣ ಇಲಾಖೆಯ ಈ ನಿರ್ಧಾರ ವಿಕೇಂದ್ರೀಕರಣದ ಪ್ರಕ್ರಿಯೆಯ ಹಿಮ್ಮುಖ ಚಲನೆಯಾಗಿದ್ದು, ಎಲ್ಲಾ ಅಧಿಕಾರವನ್ನು ಕೇಂದ್ರೀಕರಣಗೊಳಿಸುವ ಹುನ್ನಾರವಾಗಿದೆ .

ಇಲಾಖೆಯ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಗೆ ಇದು ಮತ್ತೊಂದು ನಿದರ್ಶನವಾಗಿದೆ ಹಾಗೂ ಶಿಕ್ಷಣ ಇಲಾಖೆಯ ಅವ್ಯಾಹತ ಭ್ರಷ್ಟಾಚಾರಕ್ಕೆ ಇದು ಸಾಕ್ಷಿಯಾಗಿದೆ ಎಂದು ತಿಳಿಸಿದೆ .

ಸರ್ಕಾರ ಈ ನಿರ್ಧಾರವನ್ನು ಕೂಡಲೇ ಹಿಂಪಡೆದು ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿ , ಹಿಂದಿಂನಂತೆ ಮಕ್ಕಳ ಶೂ ಮತ್ತು ಸಾಕ್ಸ್ ಖರೀದಿ ತೀರ್ಮಾನವನ್ನು ಎಸ್ ಡಿ ಎಂಸಿಗಳಿಗೆ ಬಿಡಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸರ್ಕಾರವನ್ನು ಒತ್ತಾಯಿಸುತ್ತದೆ.

ಈ ಸಂದರ್ಭದಲ್ಲಿ ನಿರಂಜನಾರಾಧ್ಯ.ವಿ.ಪಿ ಮಹಾ ಪೋಷಕರು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಹಾಗೂ ವೀರಚಾರ್ ಆರ್, ಶಿವಮೊಗ್ಗ ಜಿಲ್ಲಾ SDMC ಸಮಿತಿಗಳ ಸಮನ್ವಯ ವೇದಿಕೆ ಮೂಲಕ ಅಗ್ರಹಿಸಿದ್ದಾರೆ.

Author