ಕೆಡಿ ಸಿನಿಮಾದಲ್ಲಿ ಹೆಣ್ಣಮಕ್ಕಳು ಬಗ್ಗೆ ಅತಿರೇಕದ ಅಶ್ಲೀಲತೆ, ಅಸಹ್ಯ ಸಾಹಿತ್ಯ ; ಪ್ರೇಮ್ ವಿರುದ್ದ ದೂರು

ಮನೋರಂಜನೆ

ಧ್ರುವ ಸರ್ಜಾ ನಟಿಸಿ, ಪ್ರೇಮ್ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ: ದಿ ಡೆವಿಲ್’ದ ಹಾಡೊಂದು ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ನೋರಾ ಫತೇಹಿ ನಟಿಸಿರುವ ಹಾಡನ್ನು ಬಲು ಅದ್ಧೂರಿಯಾಗಿ ಚಿತ್ರತಂಡ ಬಿಡುಗಡೆ ಮಾಡಿತು.

ಹಾಡು ಕನ್ನಡದಲ್ಲಿ ಮಾತ್ರವೇ ಅಲ್ಲದೆ, ಹಿಂದಿ, ತೆಲುಗು ಇನ್ನೂ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಯೂಟ್ಯೂಬ್​​ನಲ್ಲಿ ರಿಲೀಸ್ ಆಯ್ತು.

ಆದರೆ ಈ ಹಾಡು ಇದೀಗ ವಿವಾದಕ್ಕೆ ಸಿಲುಕಿದೆ. ಕನ್ನಡದಲ್ಲಿ ‘ಸರ್ಸೆ ಸೆರಗ ಸರ್ಸೆ’ ಎಂದಿರುವ ಈ ಹಾಡು ಹಿಂದಿಯಲ್ಲಿ ‘ಸರ್ಕೆ ಚುನರ್’ ಎಂದಿದೆ.

ಆದರೆ ಈ ಹಾಡಿನ ಸಾಹಿತ್ಯ ತೀವ್ರ ಟೀಕೆಗೆ ಗುರಿ ಆಗಿದ್ದು, ಹಾಡಿನ ವಿರುದ್ಧ ದೂರುಗಳು ದಾಖಲಾಗಿವೆ.

ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಈ ಐಟಂ ಸಾಂಗ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಹಾಡಿನಲ್ಲಿರುವ ನೋರಾ ಫತೇಹಿ ಅವರ ನೃತ್ಯದ ಭಂಗಿಗಳು ‘ಅತಿರೇಕದ ಅಶ್ಲೀಲತೆ’ಯಿಂದ ಕೂಡಿವೆ ಎನ್ನಲಾಗಿತ್ತು. ಅದರಲ್ಲೂ ಹಾಡಿನ ಸಾಹಿತ್ಯವಂತೂ ತೀರ ಅಶ್ಲೀಲವಾಗಿದೆ ಎನ್ನಲಾಗುತ್ತಿದೆ.

ವಿಶೇಷವಾಗಿ ಹಿಂದಿ ಹಾಡಿನ ಸಾಹಿತ್ಯದ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದು, ಇದೀಗ ದೆಹಲಿಯಲ್ಲಿ ಈ ಬಗ್ಗೆ ದೂರು ಸಹ ದಾಖಲಾಗಿದೆ.

ದೆಹಲಿಯ ವಕೀಲ ವಿನೀತ್ ಜಿಂದಾಲ್ ಎಂಬುವರು ಹಾಡಿನ ವಿರುದ್ಧ ಸಿಬಿಎಫ್​​ಸಿಗೆ ದೂರು ನೀಡಿದ್ದು, ಈ ಕೂಡಲೇ ಹಾಡನ್ನು ತೆಗೆಸಬೇಕು ಎಂದು ಮನವಿ ಮಾಡಿದ್ದಾರೆ.

ವಕೀಲ ವಿನೀತ್ ಅವರು ದೆಹಲಿ ಸೈಬರ್ ಪೊಲೀಸರಿಗೂ ಸಹ ದೂರು ನೀಡಿದ್ದು, ಈ ಹಾಡಿನ ಸಾಹಿತ್ಯ ಬರೆದವರು, ಸಂಗೀತ ನಿರ್ದೇಶಕ, ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 294 (ಮಹಿಳೆಯ ಮಾನಕ್ಕೆ ಧಕ್ಕೆ) ಮತ್ತು ಪೋಕ್ಸೊ ಕಾಯ್ದೆಯ ಅಡಿ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ದೆಹಲಿ ಮಾತ್ರವೇ ಅಲ್ಲದೆ ಮುಂಬೈನ ವರ್ಲಿ ಪೊಲೀಸ್ ಠಾಣೆಯಲ್ಲಿಯೂ ಸಹ ಈ ಸಂಬಂಧ ದೂರು ದಾಖಲಾಗಿದೆ.

ವಕೀಲ ವಿನೀತ್ ಮಾತ್ರವೇ ಅಲ್ಲದೆ ಕೆಲವು ಗಾಯಕರು ಸಹ ಈ ಹಾಡಿನ ಸಾಹಿತ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿಯೂ ಸಹ ಹಾಡಿನ ಅಶ್ಲೀಲ ಸಾಹಿತ್ಯದ ಬಗ್ಗೆ ವಿರೋಧ ವ್ಯಕ್ತವಾಗಿದೆ. ಇದರ ಗಂಭೀರತೆಯನ್ನು ಪರಿಗಣಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ.

ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ದೃಶ್ಯಗಳನ್ನು ಪ್ರದರ್ಶಿಸಿರುವುದನ್ನು ಆಯೋಗವು ಆಕ್ಷೇಪಿಸಿದೆ ಎನ್ನಲಾಗಿದೆ.

‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಹಾಡು ಐಟಂ ಹಾಡಾಗಿದ್ದು, ನೋರಾ ಫತೇಹಿ ಗ್ಲಾಮರಸ್ ಆಗಿ ಕುಣಿದಿದ್ದಾರೆ. ಸಂಜಯ್ ದತ್ ಸಹ ಹಾಡಿನಲ್ಲಿದ್ದಾರೆ.

ನೋರಾ ಫತೇಹಿ ಮದ್ಯದ ಕುರಿತಾಗಿ ಹಾಡುವ ಹಾಡು ಅದಾಗಿದೆ ಆದರೆ ಹಾಡಿನಲ್ಲಿ ಸಾಕಷ್ಟು ದ್ವಂದ್ವಾರ್ಥಗಳಿವೆ. ಇದೇ ಕಾರಣಕ್ಕೆ ಇದೀಗ ಹಾಡು ವಿವಾದಕ್ಕೆ ಕಾರಣವಾಗಿದೆ.

Author