ಶಿವಮೊಗ್ಗ, ಅಡಕೆ ಬೆಳೆಗಾರರಿಗೆ ನೆಮ್ಮದಿ ತರುವಂತಹ ಸುದ್ದಿಯೊಂದು ವಿಧಾನ ಪರಿಷತ್ತಿನಲ್ಲಿ ಹೊರಬಿದ್ದಿದೆ. ತಂಬಾಕು ರಹಿತವಾಗಿ ಅಲ್ಪ ಪ್ರಮಾಣದಲ್ಲಿ ಅಡಕೆ ಸೇವನೆ ಮಾಡುವುದರಿಂದ ಯಾವುದೇ ಆರೋಗ್ಯದ ಹಾನಿ ಸಂಭವಿಸುವುದಿಲ್ಲ ಎಂದು ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯದ ಸಂಶೋಧನಾ ವರದಿ ತಿಳಿಸಿದೆ.
ಈ ಮಹತ್ವದ ಮಾಹಿತಿಯನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಸದನಕ್ಕೆ ನೀಡಿದ್ದಾರೆ. ಅಡಕೆಯ ಮೇಲೆ ದಶಕಗಳಿಂದ ಅಂಟಿಕೊಂಡಿರುವ ಕ್ಯಾನ್ಸರ್ ಕಾರಕ ಎಂಬ ಕಳಂಕವನ್ನು ತೊಡೆದುಹಾಕಲು ಸರ್ಕಾರವು ಸುಮಾರು 31 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸಂಶೋಧನೆಯನ್ನು ಕೈಗೊಂಡಿತ್ತು. ಪಾನ್ ಮಸಾಲದಂತಹ ಪದಾರ್ಥಗಳಲ್ಲಿ ಮಿತವಾಗಿ ಅಡಕೆ ಬಳಸಿದರೆ ಅದರಿಂದ ಯಾವುದೇ ಅಪಾಯವಿಲ್ಲ ಎಂದು ಪ್ರಾಥಮಿಕ ವರದಿಯು ಸ್ಪಷ್ಟಪಡಿಸಿದೆ. ಕೇವಲ ಸೇವನೆಯಷ್ಟೇ ಅಲ್ಲದೆ, ಅಡಕೆ ಹಾಳೆಯ ತಟ್ಟೆಗಳ ಬಳಕೆಯೂ ಸಹ ಆರೋಗ್ಯಕ್ಕೆ ಅತ್ಯಂತ ಸುರಕ್ಷಿತ ಎಂದು ಕೇರಳದ ಸಂಸ್ಥೆಯೊಂದು ನೀಡಿದ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿಯ ಪ್ರತಾಪ್ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಡಕೆ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರವು ಸಕಾರಾತ್ಮಕ ಹೆಜ್ಜೆ ಇಡುತ್ತಿದೆ ಎಂದು ತಿಳಿಸಿದರು.
ಸಂಶೋಧನೆಯ ಪೂರ್ಣ ಪ್ರಮಾಣದ ಅಂತಿಮ ವರದಿ ಶೀಘ್ರದಲ್ಲೇ ಬರಲಿದ್ದು, ಆ ಬಳಿಕ ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ಬಗ್ಗೆ ಸರ್ಕಾರವೇ ಅಧಿಕೃತವಾಗಿ ವ್ಯಾಪಕ ಪ್ರಚಾರ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಈ ಮೂಲಕ ಅಡಕೆ ಕೃಷಿಯನ್ನು ನೆಚ್ಚಿಕೊಂಡಿರುವ ಲಕ್ಷಾಂತರ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.



