ನವದೆಹಲಿ,ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ನೈಸರ್ಗಿಕ ಅನಿಲದ ಸರಬರಾಜಿನಲ್ಲಿ ತೊಡಕು ಉಂಟಾಗಿದೆ. ಅನಿಲ ಕೊರತೆ ಉಂಟಾಗಲಿದೆ ಎಂಬ ಭೀತಿಯಲ್ಲಿ ಜನರು ಮುಂಗಡ ಬುಕಿಂಗ್ ಆರಂಭಿಸಿದ್ದಾರೆ.
ಜನರ ಈ ಕಳವಳಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಅನಿಲ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಭಯ ನೀಡಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, “ಎಲ್‌ಪಿಜಿ ಸಿಲಿಂಡರ್‌ಗಳನ್ನು ಭಯಭೀತರಾಗಿ ಮುಂಗಡ ಬುಕಿಂಗ್ ಮಾಡುವ ಅಗತ್ಯವಿಲ್ಲ.
ಹಿಂದಿನಂತೆ ಎರಡೂವರೆ ದಿನಗಳಲ್ಲಿ ನಿಮ್ಮ ಮನೆಗಳಿಗೆ ಗ್ಯಾಸ್ ಸಿಲಿಂಡರ್ ಬರುವಂತೆ ಕ್ರಮ ವಹಿಸಲಾಗಿದೆ” ಎಂದು ತಿಳಿಸಿದರು.”ಭಾರತಕ್ಕೆ ಬರುವ ಕಚ್ಚಾ ತೈಲ ಸರಬರಾಜು ಸುರಕ್ಷಿತವಾಗಿದೆ.
ಹಾರ್ಮುಜ್ ಜಲಸಂಧಿಯ ಮುಚ್ಚಿದ್ದರೂ, ಬೇರೆ ಮಾರ್ಗಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ, ಸರ್ಕಾರವು ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಸೂಚಿಸಿದ್ದರಿಂದ ಶೇಕಡಾ 25 ರಷ್ಟು ಏರಿಕೆಯಾಗಿದೆ” ಎಂದು ಹೇಳಿದರು.
“ಹೀಗಾಗಿ, ಅಡುಗೆ ಅನಿಲ ಸಿಲಿಂಡರ್‌ಗಳನ್ನು ಭಯಭೀತರಾಗಿ ಬುಕಿಂಗ್ ಮಾಡುವ ಅಗತ್ಯವಿಲ್ಲ. ಈ ಹಿಂದೆ ವಿತರಿಸಿದಂತೆ ಎರಡೂವರೆ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ನಿಮ್ಮ ಮನೆಗಳಿಗೆ ಬರುತ್ತದೆ” ಎಂದು ಭರವಸೆ ನೀಡಿದರು.
“ಭಾರತದ ಕಚ್ಚಾ ತೈಲ ಸರಬರಾಜು ಸುರಕ್ಷಿತವಾಗಿದೆ. ನಮ್ಮ ದೈನಂದಿನ ಬಳಕೆ ಸುಮಾರು 55 ಲಕ್ಷ ಬ್ಯಾರೆಲ್‌ಗಳು. ತೈಲವನ್ನು ವಿವಿಧ ಮೂಲಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹಾರ್ಮುಜ್ ಜಲಮಾರ್ಗದಿಂದ ಬರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಣೆ ಮಾಡಲಾಗುತ್ತಿದೆ” ಎಂದು ಅವರು ತಿಳಿಸಿದರು.
“ಭಾರತವು ಸುಮಾರು 40 ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ತೈಲ ಮಾರುಕಟ್ಟೆ ಕಂಪನಿಗಳು ವಿವಿಧ ಮೂಲಗಳಿಂದ ವಿವಿಧ ಕಚ್ಚಾ ಸರಕುಗಳನ್ನು ಪಡೆದುಕೊಂಡಿವೆ. ಹಾರ್ಮುಜ್ ಜಲಸಂಧಿಯ ಬದಲಿಗೆ ದೇಶಕ್ಕೆ ಬರುವ ಕಚ್ಚಾ ತೈಲದ ಸುಮಾರು 70 ಪ್ರತಿಶತ ಬೇರೆ ಮಾರ್ಗಗಳಿಂದ ಬರುತ್ತಿದೆ” ಎಂದರು.
ನೈಸರ್ಗಿಕ ಅನಿಲ, ಇಂಧನ ಕೊರತೆ ಉಂಟಾಗದಂತೆ ಅದರ ಸಂಗ್ರಹಣೆ ಮತ್ತು ಬ್ಲ್ಯಾಕ್ ಮಾರುಕಟ್ಟೆಯಲ್ಲಿ ಅಧಿಕ ಬೆಲೆಯನ್ನು ತಡೆಯಲು ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ. ಅಲ್ಲದೇ, ವಿನಾಕಾರಣ ಗ್ಯಾಸ್ ಸಿಲಿಂಡರ್‌ಗಳನ್ನು ದಾಸ್ತಾನು ಮಾಡದಂತೆ ನಿಗಾ ವಹಿಸಲೂ ತಾಕೀತು ಮಾಡಲಾಗಿದೆ.



