ದಾವಣಗೆರೆ, ಜಮೀರ್ ಅಹ್ಮದ್ ಅವರ ಬಗ್ಗೆ ಏನಾದರೂ ಮಾತನಾಡಿದರೆ ಜನ ಸಹಿಸುವುದಿಲ್ಲ. ಕೂಡಲೇ ಜಮೀರ್ ಅವರ ಬಳಿ ಕ್ಷಮೆ ಕೋರುವಂತೆ ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಉಪಾಧ್ಯಕ್ಷ ಹಾಗೂ ಕೆಎಂಡಿಸಿ ನಿರ್ದೆಶಕ ಸಿರಾಜ್ ಅಹ್ಮದ್ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರಿಗೆ ಆಗ್ರಹಿಸಿದ್ದಾರೆ.
ಜಮೀರ್ ವಿರುದ್ಧ ಏಕವಚನದಲ್ಲಿ ಮಲ್ಲಿಕಾರ್ಜುನ್ ಮಾತನಾಡಿದ್ದಕ್ಕೆ ಬೂದಿಹಾಳ ರಸ್ತೆಯಲ್ಲಿನ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷಕ್ಕೆ ಮತದಾರರು ಮಾತ್ರ ದೊಡ್ಡವರು, ನೀವು ಅಲ್ಲ ಜಮೀರ್ ಅಲ್ಲ. ಜಮೀರ್ ಎರಡು ಜಿಲ್ಲೆಯ ಉಸ್ತುವಾರಿ ಹಾಗೂ ತಾರಾ ಪ್ರಚಾರಕರಾಗಿದ್ದಾರೆ.
ಜಮೀರ್ ಬಳಿ ಕ್ಷಮೆ ಕೇಳದೇ ಇದ್ದರೆ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಶಾಮನೂರು ಶಿವಶಂಕರಪ್ಪ ಅವಧಿಯಿಂದ ನಾವು ಮನವಿ ಮಾಡುತ್ತಿದ್ದು, ಇಲ್ಲಿಯವರೆಗೂ ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದೇವೆ. ಅವರ ಕಾಲವಾದ ನಂತರ ನಮಗೆ ಅವಕಾಶ ಕೇಳಿದ್ದೇವೆ. ಶಾಮನೂರು ನಮ್ಮ ಜೊತೆ ಚೆನ್ನಾಗಿದ್ದರು. ಆದರೆ ಎಸ್ಎಸ್ ಮಲ್ಲಿಕಾರ್ಜುನ್ ವರ್ತನೆ ಬೇರೆ ರೀತಿಯಲ್ಲಿ ಇದೆ. ಶಿವಶಂಕರಪ್ಪನವರ ಅವರ ಬುದ್ದಿ ಅವರ ಮಗನಲ್ಲಿ ಇಲ್ಲ ಎಂದು ದೂರಿದರು.
ಜಮೀರ್ ಅಲ್ಪಸಂಖ್ಯಾತರಲ್ಲದೇ ಎಲ್ಲಾ ಅಹಿಂದ ಸಮುದಾಯಗಳ ನಾಯಕರಾಗಿದ್ದಾರೆ. ರಾಜ್ಯದಲ್ಲಿ ಚುನಾವಣೆ ಗೆಲುವಿಗೆ ಜಮೀರ್ ಅಹ್ಮದ್ ಖಾನ್ ಶ್ರಮ ಸಾಕಷ್ಟಿದೆ. ಅಂತವರಿಗೆ ಮಲ್ಲಿಕಾರ್ಜುನ್ ಏಕವಚನದಲ್ಲಿ ಮಾತನಾಡಿದ್ದಾರೆ.
ಅದಕ್ಕೆ ಜಮೀರ್ ಸೌಮ್ಯವಾಗಿ, ಸರಳವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜಮೀರ್ ಅಹ್ಮದ್ ಅವರಿಗೆ ಇವರಿಗಿಂತ ಜೋರಾಗಿ ಮಾತನಾಡಲು ಗೊತ್ತಿದೆ. ಅಲ್ಪಸಂಖ್ಯಾತರು ಟಿಕೆಟ್ ಕೇಳಿದ್ದಕ್ಕೆ ನಿಮಗೆ ಇಷ್ಟು ಕೋಪ ಯಾಕೆ ಎಂದು ಪ್ರಶ್ನಿಸಿದರು?



