ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್ ; ತೈಲ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ

ವಿದೇಶ

ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಜೊತೆ ನಡೆಸುತ್ತಿರುವ ಯುದ್ಧವು ಇದೀಗ ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಮಾರ್ಗಗಳಲ್ಲಿ ಒಂದಾದ ‘ಹಾರ್ಮುಜ್ ಜಲಸಂಧಿ’ಗೆ ವ್ಯಾಪಿಸಿದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ವಿಶ್ವದ ಒಟ್ಟು ಬಳಕೆಯ ಐದನೇ ಒಂದು ಭಾಗದಷ್ಟು ತೈಲ ಮತ್ತು ಭಾರಿ ಪ್ರಮಾಣದ ನೈಸರ್ಗಿಕ ಅನಿಲವನ್ನು ಸಾಗಿಸುವ ಈ ಜಲಸಂಧಿಯ ಮೂಲಕ ನಡೆಯುವ ಹಡಗು ಸಂಚಾರವು ಈಗ ಬಹುತೇಕ ಸ್ಥಗಿತಗೊಂಡಿದೆ.

ಈ ಪ್ರದೇಶದಲ್ಲಿ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಗಳಿಂದಾಗಿ ಇಂತಹ ಗಂಭೀರ ಪರಿಸ್ಥಿತಿ ಉಂಟಾಗಿದೆ.ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (ಐಆರ್‌ಜಿಸಿ) ಕಮಾಂಡರ್ ಒಬ್ಬರು ಸೋಮವಾರ ಈ ಕುರಿತು ಎಚ್ಚರಿಕೆ ನೀಡಿದ್ದು, ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಘೋಷಿಸಿದ್ದಾರೆ.

ಅಷ್ಟೇ ಅಲ್ಲದೆ, ಈ ಜಲಮಾರ್ಗದ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗನ್ನು ಸುಟ್ಟು ಭಸ್ಮ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇರಾನ್ ಮತ್ತು ಒಮಾನ್ ದೇಶಗಳನ್ನು ಬೇರ್ಪಡಿಸುವ ಈ ಜಲಸಂಧಿಯ ಸುತ್ತ ಕನಿಷ್ಠ ಐದು ಟ್ಯಾಂಕರ್‌ಗಳು ಹಾನಿಗೊಳಗಾಗಿವೆ, ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 150 ಹಡಗುಗಳು ಮಧ್ಯದಾರಿಯಲ್ಲೇ ಸಿಲುಕಿಕೊಂಡಿವೆ ಎಂದು ಅಲ್‌-ಜಝೀರಾ ವರದಿ ಮಾಡಿದೆ.

ಶನಿವಾರ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯ ಮುನ್ಸೂಚನೆಯಿಂದಾಗಿ ಉಂಟಾದ ಉದ್ವಿಗ್ನತೆಯ ಮಧ್ಯೆ, ಶುಕ್ರವಾರ ಪ್ರತಿ ಬ್ಯಾರೆಲ್‌ಗೆ 73 ಡಾಲರ್ ಇದ್ದ ತೈಲ ಬೆಲೆಯು ಸೋಮವಾರದ ವೇಳೆಗೆ 79.40 ಡಾಲರ್ ದಾಟಿದೆ.

ವಿಂಡ್‌ವಾರ್ಡ್‌ನ ಹಿರಿಯ ಕಡಲ ಗುಪ್ತಚರ ವಿಶ್ಲೇಷಕಿ ಮಿಚೆಲ್ ಬಾಕ್‌ಮನ್ ಅಲ್- ಜಝೀರಾ ಜೊತೆ ಮಾತನಾಡುತ್ತಾ, ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರವು ಶೇಕಡ 80ರಷ್ಟು ಕುಸಿದಿದೆ ಎಂದು ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ಮತ್ತು ಪರ್ಷಿಯನ್ ಕೊಲ್ಲಿಯಿಂದ ಹೊರಡುವ ಹಡಗು ಮಾರ್ಗಗಳ ಸರಕು ಸಾಗಣೆ ವೆಚ್ಚದಲ್ಲಿ ಆಗಲೇ ಉಂಟಾಗಿದ್ದ ಭಾರಿ ಏರಿಕೆಯಿಂದ ಹಡಗು ಉದ್ಯಮವು ಈಗಾಗಲೇ ತತ್ತರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಕಂಟ್ರೋಲ್ ರಿಸ್ಕ್ಸ್‌ನ ಕಡಲ ಗುಪ್ತಚರ ಮತ್ತು ಭದ್ರತಾ ಸೇವೆಗಳ ನಿರ್ದೇಶಕ ಕಾರ್ಮಕ್ ಮೆಕ್‌ಗ್ಯಾರಿ ಅವರು ಮಾತನಾಡಿ, ಶನಿವಾರದಂದು ಅಂತಾರಾಷ್ಟ್ರೀಯ ತುರ್ತು ಸಂಕೇತ ತರಂಗಾಂತರದ ಮೂಲಕ ನಾವಿಕರಿಗೆ ಇರಾನ್‌ನಿಂದ ಒಂದು ಸಂದೇಶ ಬಂದಿದ್ದು, ಅದರಲ್ಲಿ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ತಿಳಿಸಲಾಗಿತ್ತು ಎಂದಿದ್ದಾರೆ.

“ಆ ಪ್ರದೇಶದಲ್ಲಿದ್ದ ಪ್ರತಿಯೊಂದು ಹಡಗಿಗೂ ಆ ಸಂದೇಶ ಕೇಳಿಸಿತ್ತು… ಮತ್ತು ಹೆಚ್ಚಿನ ಹಡಗುಗಳು ಸಂಚಾರ ಸ್ಥಗಿತಗೊಳಿಸಲು ಆ ಒಂದು ಸಂದೇಶವೇ ಸಾಕಾಗಿತ್ತು” ಎಂದು ಅವರು ತಿಳಿಸಿದ್ದಾರೆ.

ಹಡಗುಗಳ ಚಲನವಲನವನ್ನು ಪತ್ತೆಹಚ್ಚುವ ‘ಕೆಪ್ಲರ್’ ಸಂಸ್ಥೆಯ ವರದಿಯ ಪ್ರಕಾರ, ಭಾನುವಾರದಂದು ಈ ಜಲಸಂಧಿಯಲ್ಲಿ ಅತ್ಯಂತ ಸೀಮಿತ ಪ್ರಮಾಣದ ಹಡಗು ಸಂಚಾರ ಕಂಡುಬಂದಿದೆ. ಈ ಮಾರ್ಗದಲ್ಲಿ ಮುಖ್ಯವಾಗಿ ಇರಾನ್ ಧ್ವಜ ಹೊಂದಿರುವ ಹಡಗುಗಳು ಮತ್ತು ಇರಾನ್‌ನ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರವಾದ ಚೀನಾದ ಹಡಗುಗಳು ಮಾತ್ರ ಸಂಚರಿಸುತ್ತಿವೆ ಎಂಬುದು ತಿಳಿದುಬಂದಿದೆ.

Author