ಅಮೆರಿಕಾ ಹಾಗೂ ಇಸ್ರೇಲ್, ಇರಾನ್ ಮೇಲೆ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ. ಈ ಕುರಿತು ಸ್ವತಃ ಇರಾನ್ ಸರ್ಕಾರಿ ಮಾಧ್ಯಮ ಸಂಸ್ಥೆಯೇ ತಿಳಿಸಿದೆ. ಹೀಗೆ ಈ ವಾರ್ತೆಯನ್ನು ಕೇಳಿದ ತಕ್ಷಣ ಇರಾನ್ ಜನತೆ ಪಟಾಕಿ ಸಿಡಿಸಿ, ಬೀದಿಗಿಳಿದು ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ, ಸ್ವತಂತ್ರ ಎಂಬ ಘೋಷಣೆಗಳನ್ನು ಸಹ ಕೂಗಿ ಸಂಭ್ರಮಾಚರಣೆಯನ್ನು ಮಾಡುತ್ತಿದ್ದಾರೆ.
ಅಮೆರಿಕಾ-ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿ ಕಾರ್ಯಚರಣೆಯಿಂದಾಗಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆಂದು ಇರಾನ್ ಸರ್ಕಾರಿ ಮಾಧ್ಯಮ ದೃಢಪಡಿಸಿದೆ. ಈ ಬೆನ್ನಲ್ಲೆ, ಇರಾನ್ ದೇಶದ ನಾಯಕನ ಮರಣ ವಾರ್ತೆಯನ್ನು ಕೇಳಿ ಅಲ್ಲಿನ ಜನತೆಯೇ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆಯಲ್ಲಿ ತೊಡಿಗಿದ್ದಾರೆ.
ಅಮೆರಿಕಾ-ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಇರಾನ್ ಸುಪ್ರೀಂ ಲೀಡರ್ ಖಮೇನಿ ಹತ್ಯೆಯಾಗಿದ್ದು, ಇಹಲೋಕ ತ್ಯಜಿಸಿದ್ದಾರೆ. ಹೀಗೆ ತನ್ನ ದೇಶದ ನಾಯಕ ನಿಧನರಾಗಿದ್ದಾನೆ ಎಂಬ ವಾರ್ತೆಯನ್ನು ಕೇಳಿದ ಯಾವ ದೇಶದ ಜನತೆಯಾದರೂ ಶೋಕಸಾಗರದಲ್ಲಿ ಮುಳುಗಿದ್ದಾರೆ ಎಂಬ ವಾರ್ತೆಯನ್ನು ಕೇಳಿರುತ್ತಿರಿ. ಆದರೆ, ಇರಾನ್ ನಲ್ಲಿ ಮಾತ್ರ ಖಮೇನಿ ನಿಧನವಾರ್ತೆಯನ್ನು ಕೇಳಿ ಬೀದಿಗಿಳಿದು ಜನ ಸ್ವತಂತ್ರ ಸಿಕ್ಕಿದೆ ಎಂದು ಇರಾನ್ ನಾಗರಿಕರು ನೃತ್ಯಗಳಿಂದ ಸಂತೋಷಗಾನ ಮಾಡುತ್ತಾ, ಪಟಾಕಿ ಸಿಡಿಸಿ, ನಿರಂತರವಾಗಿ ಶಿಳ್ಳೆಗಳನ್ನು ಹೊಡೆದು ಸಂಭ್ರಮಿಸುತ್ತದ್ದಾರೆ.
https://x.com/i/status/2027883845412966527
ಇರಾನ್ ನ ಟೆಹ್ರಾನ್, ಕರಾಜ್ ಮತ್ತು ಕೇಂದ್ರ ನಗರ ಇಸ್ಫಹಾನ್, ಶಿರಾಜ್ ಮತ್ತು ಅಬ್ದಾನನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ಬೀದಿಗಿಳಿದಿದ್ದು, ಸಂಭ್ರಮಾಚರಣೆಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಜನರೆಲ್ಲಾ ಗುಂಪಾಗಿ ಸೇರಿದ್ದು, ರಸ್ತೆ ಮಧ್ಯದಲ್ಲೇ ಜೋರಾಗಿ ಕಿರುಚಿಕೊಂಡು ನೃತ್ಯಗಳನ್ನು ಆಡುತ್ತಿದ್ದರೆ, ಇನ್ನು, ಕೆಲ ವಿಡಿಯೋಗಳಲ್ಲಿ ಜನರು ತಮ್ಮ ಕಿಟಕಿಗಳ ಬಳಿ ನಿಂತುಕೊಂಡು ʼಸ್ವತಂತ್ರ.. ಸ್ವತಂತ್ರ..ʼ ಎಂದು ಹರ್ಷೋದ್ಗಾರ ಮಾಡುತ್ತಿದ್ದಾರೆ.
ಅಲ್ಲದೆ, ಜನವರಿಯಲ್ಲಿ ಇರಾನ್ ಪ್ರತಿಭಟನೆಗಳ ಸಮಯದಲ್ಲಿ ಸಾಮೂಹಿಕವಾಗಿ ಸಾವನ್ನಪ್ಪಿದ್ದ ಪ್ರತಿಭಟನಾಕಾರರ ಚಿತ್ರಗಳನ್ನು ಹೊತ್ತು ಮೆರವಣಿಗೆ ಮಾಡುತ್ತಿರುವ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿದೆ.
ಕೇವಲ ಇರಾನ್ ನಲ್ಲಿ ಮಾತ್ರವಲ್ಲದೆ, ಇತ್ತ ಅಮೆರಿಕಾದಲ್ಲಿಯೂ ಸಹ ಇರಾನಿಯನ್ನರು ಸಂಭ್ರಮಾಚರಣೆಯನ್ನು ಮಾಡುತ್ತಿದ್ದಾರೆ. ಅಮೆರಿಕದ ಲಾಸ್ ಏಂಜಲೀಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇರಾನ್ ಪ್ರಜೆಗಳು ಇಸ್ರೇಲ್-ಯುಎಸ್ ಜಂಟಿ ಕಾರ್ಯಚರಣೆಗೆ ಶ್ಲಾಘನೆ ವ್ಯಕ್ತಪಡಿಸುತ್ತಾ ಬೀದಿಗಳಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಇನ್ನು, ಇರಾನ್ ಸರ್ಕಾರ ಮಾಧ್ಯಮ IRIB, “ಅಮೆರಿಕ ಮತ್ತು ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಸುಪ್ರೀಂ ಲೀಡರ್ ಮೃತಪಟ್ಟಿದ್ದಾರೆ. ದೇಶಕ್ಕಾಗಿ ಹುತಾತ್ಮರಾದ ಖಮೇನಿ ಅವರನ್ನು ಇರಾನಿಯನ್ನರು ಎಂದಿಗೂ ಮರೆಯವುದಿಲ್ಲ” ಎಂದು ದೃಢಪಡಿಸಿದೆ. ಇನ್ನು, ಇರಾನ್ ನ ರಕ್ಷಣಾ ಸಚಿವ ಸೇರಿದಂತೆ ಖಮೇನಿ ಕುಟುಂಬಸ್ಥರು ಸಹ ಸಾವಿಗೀಡಾಗಿದ್ದಾರೆ ಎಂದು ಖಚಿತಪಡಿಸಿದೆ.
ಇನ್ನು, ಇದಕ್ಕೂ ಮೊದಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಖಮೇನಿ ಹತ್ಯೆಯಾಗಿರುವುದಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರಾದ ಖಮೇನಿ ನಿಧನರಾಗಿದ್ದಾರೆ” ಎಂದು ತಿಳಿಸಿದ್ದರು. ಅಲ್ಲದೆ, ಇರಾನ್ ಪರಮಾಣು ಸಾಮರ್ಥ್ಯಗಳನ್ನು ನಿಷ್ಕ್ರಿಯಗೊಳ್ಳುವರೆಗೂ ದಾಳಿಗಳು ಮುಂದುವರೆಯಲಿವೆ ಎಂದು ಖಚಿತಪಡಿಸಿದ್ದಾರೆ.
ಸದ್ಯ ಖಮೇನಿ ಹತ್ಯೆಯಿಂದಾಗಿ ಇರಾನ್ ನ ನಾಯಕತ್ವ ಅತಂತ್ರ ಸ್ಥಿತಿಗೆ ತಲುಪಿದ್ದು, ಮುಂಬರುವ ದಿನಗಳಲ್ಲಿ ಅಮೆರಿಕಾ ಇರಾನ್ ಅನ್ನು ವಶಪಡಿಸಿಕೊಳ್ಳಲಿದ್ದು, ಇರಾನ್ ನ ಮುಂದಿನ ನಾಯಕತ್ವವನ್ನು ತಾವೇ ನಿರ್ಧರಿಸುವ ಸಾಧ್ಯತೆಗಳಿವೆ. ಇನ್ನು, ಈ ದಾಳಿಗಳು ಇರಾನ್ ಮಿತ್ರರಾಷ್ಟ್ರಗಳಾಗಿರುವ ರಷ್ಯಾ ಹಾಗೂ ಚೀನಾಗೆ ಹಿನ್ನಡೆಯಾಗಲಿದ್ದು, ಇವು ಹೇಗೆ ಪ್ರತಿಕ್ರಿಯಿಸಲಿವೆ ಎಂದು ಕಾದು ನೋಡಬೇಕಿದೆ.
ಆದಾಗ್ಯೂ, ತನ್ನ ದೇಶದ ನಾಯಕನ ನಿಧನ ವಾರ್ತೆಯನ್ನು ಕೇಳಿ ಅಲ್ಲಿನ ಜನತೆ ಸಂಭ್ರಮದಲ್ಲಿರುವುದು ವಿಪರ್ಯಾಸವೆನಿಸಿದರೂ, ಇದು ಅಲ್ಲಿನ ಜನತೆ ಈ ನಾಯಕತ್ವದಿಂದ ಅದೆಷ್ಟು ಸಂಕಷ್ಟಗಳನ್ನು ಅನುಭವಿಸಿದ್ದಾರೆ ಎಂಬುದನ್ನು ಎತ್ತಿ ತೋರಿಸುವಂತಿದೆ.



