ವಾಷಿಂಗ್ಟನ್: ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎಂಬ ಸುದ್ದಿ ನಿಜವೆಂದು ತಾನು ನಂಬುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಎನ್ಬಿಸಿ ನ್ಯೂಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಟ್ರಂಪ್ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಖಮೇನಿ ಸಾವಿನ ಬಗ್ಗೆ ತಮಗೆ ಮಾಹಿತಿ ಸಿಕ್ಕಿದ್ದು, ಅದು ಸತ್ಯವೆಂದು ಭಾವಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಖಮೇನಿ ಮಾತ್ರವಲ್ಲ, ಇರಾನ್ನಲ್ಲಿ ನಿರ್ಧಾರ ತೆಗೆದುಕೊಳ್ಳುವಂತಹ ಬಹುತೇಕ ದೊಡ್ಡ ನಾಯಕರು ಕೂಡ ಈಗಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. “ಇರಾನ್ ಸರ್ಕಾರದ ಅನೇಕ ಪ್ರಮುಖ ನಾಯಕರು ಹತರಾಗಿದ್ದಾರೆ. ಸದ್ಯಕ್ಕೆ ಅಲ್ಲಿ ನಿರ್ಧಾರ ತೆಗೆದುಕೊಳ್ಳುವಂತಹ ನಾಯಕತ್ವವೇ ಉಳಿದಿಲ್ಲ,” ಎಂದು ಟ್ರಂಪ್ ಸೇರಿಸಿದ್ದಾರೆ.
ನಂತರ ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ‘ದಿ ಟ್ರೂತ್’ನಲ್ಲೂ ಈ ಬಗ್ಗೆ ಬರೆದುಕೊಂಡ ಟ್ರಂಪ್, ‘ಚರಿತ್ರೆಯಲ್ಲೇ ಅತ್ಯಂತ ಕೆಟ್ಟ ಮನುಷ್ಯ ಈಗ ಹತನಾಗಿದ್ದಾನೆ’ ಎಂದು ಹೇಳಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ನ ಗುಪ್ತಚರ ವ್ಯವಸ್ಥೆಯನ್ನು ಮೀರಿ ನಿಲ್ಲಲು ಖಮೇನಿಗೆ ಸಾಧ್ಯವಾಗಲಿಲ್ಲ ಎಂದೂ ಟ್ರಂಪ್ ಪ್ರತಿಪಾದಿಸಿದ್ದಾರೆ.



