ದ್ವಿತೀಯ PUC, SSLC ಪ್ರಶ್ನೆಪತ್ರಿಕೆ ಲೀಕ್ ಹೆಸರಿನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಮೋಸ ಯತ್ನ ; ವಿದ್ಯಾರ್ಥಿಗಳಿಗೆ ಎಚ್ಚರಿಕೆ

ಕರ್ನಾಟಕ

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆ ಮಾರಾಟದ ಹೆಸರಿನಲ್ಲಿ ಮೋಸ ಯತ್ನಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಕೆಲವು ದುರುದ್ದೇಶಿತ ಖಾತೆಗಳು “ಹಣ ನೀಡಿದರೆ ಪ್ರಶ್ನೆಪತ್ರಿಕೆ ಕೊಡುತ್ತೇವೆ” ಎಂದು ಪೋಸ್ಟ್‌ಗಳನ್ನು ಹಾಕಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಗುರಿಯಾಗಿಸಿಕೊಂಡಿವೆ.ಪರೀಕ್ಷೆಗಳು ಫೆಬ್ರವರಿ 28ರಿಂದ ದ್ವಿತೀಯ ಪಿಯುಸಿ ಮತ್ತು ಮಾರ್ಚ್ 18ರಿಂದ ಎಸ್‌ಎಸ್‌ಎಲ್‌ಸಿ ಆರಂಭವಾಗಲಿದ್ದು, ಈ ಸಮಯದ ಆತಂಕವನ್ನು ದುರುಪಯೋಗಪಡಿಸಿಕೊಂಡು ಹಣ ದೋಚುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

ವಿಶೇಷವಾಗಿ Instagramನಲ್ಲಿ ಕೆಲವು ಖಾತೆಗಳು ಮೆಸೇಜ್ ಮೂಲಕ ಹಣ ಕೇಳಿ ಪ್ರಶ್ನೆಪತ್ರಿಕೆ ಒದಗಿಸುವುದಾಗಿ ಹೇಳಿರುವುದು ಕಂಡುಬಂದಿದೆ. ವಿಷಯ ವೈರಲ್ ಆಗುತ್ತಿದ್ದಂತೆ ಸಂಬಂಧಿತ ಖಾತೆಗಳು ಅಳಿಸಲ್ಪಟ್ಟಿವೆ.ಈ ಘಟನೆ ಬಗ್ಗೆ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗಮನಹರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಅಧಿಕಾರಿಗಳು ವಿದ್ಯಾರ್ಥಿಗಳು ಯಾವುದೇ ರೀತಿಯ ಹಣ ಪಾವತಿ ಮಾಡಬಾರದು ಹಾಗೂ ಇಂತಹ ಖಾತೆಗಳಿಗೆ ಪ್ರತಿಕ್ರಿಯಿಸಬಾರದು ಎಂದು ಮನವಿ ಮಾಡಿದ್ದಾರೆ.ಸೈಬರ್ ಕ್ರೈಂ ವಿಭಾಗವು ಇಂತಹ ಖಾತೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದು, ಪ್ರಶ್ನೆಪತ್ರಿಕೆ ಭದ್ರತೆಗೆ ಹೆಚ್ಚುವರಿ ಕ್ರಮಗಳನ್ನು ಜಾರಿಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

ಅಧಿಕಾರಿಗಳ ಪ್ರಕಾರ, ಇವು ನಿಜವಾದ ಲೀಕ್ ಅಲ್ಲ; ವಿದ್ಯಾರ್ಥಿಗಳನ್ನು ಮೋಸಗೊಳಿಸುವ ಉದ್ದೇಶದ ಪೋಸ್ಟ್‌ಗಳಾಗಿರಬಹುದು.

ಎಚ್ಚರಿಕೆ : ವಿದ್ಯಾರ್ಥಿಗಳು ಮತ್ತು ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಅಪರಿಶೀಲಿತ ಮಾಹಿತಿಯನ್ನು ನಂಬದೆ, ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

Author